ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರಲಿದ್ದಾರೆ ಎಂಬುದನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನ ಹಂಚಿಕೆ ಕುರಿತು ಯಾವುದೇ ಪ್ರಸ್ತಾಪವೇ ನಡೆದಿಲ್ಲ ಎಂದು ಹೇಳಿದ್ದಾರೆ.
“ಸಿಎಂ ಅಧಿಕಾರ ಹಂಚಿಕೆಯ ಮಾತೇ ನಡೆದಿಲ್ಲ. ಅದು ನಡೆದಿಲ್ಲ ಎಂದ ಮೇಲೆ ಅದರ ಜಾರಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಿದ್ದರಾಮಯ್ಯ ಅವರನ್ನು ಸಿಎಂ ಎಂದು ಹೈಕಮಾಂಡ್ ಘೋಷಿಸಿದೆ. ಹೈಕಮಾಂಡ್ ಎಲ್ಲಾದರೂ ಸಿದ್ದರಾಮಯ್ಯ ಬೇಡ ಎಂದು ಹೇಳಿದೆಯೇ? ಇಲ್ಲ ತಾನೇ” ಎಂದು ಪರಮೇಶ್ವರ್ ಪ್ರಶ್ನಿಸಿದರು.
ಸಿದ್ದರಾಮಯ್ಯ ಬದಲಾವಣೆ ಕುರಿತು ಹೈಕಮಾಂಡ್ ಎಲ್ಲೂ ಮಾತನಾಡಿಲ್ಲ ಎಂದು ಹೇಳಿದ ಅವರು, “ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹೈಕಮಾಂಡ್‌ಗೆ ಗೊಂದಲವಾಗಿದೆ ಎಂಬ ಭಾವನೆ ಇಲ್ಲ. ಹೈಕಮಾಂಡ್ ತನ್ನ ಅಗತ್ಯ ಇದ್ದಾಗ ಮಾತನಾಡುತ್ತದೆ. ಈಗ ಸುಮ್ಮನಿದೆ ಎಂದರೆ ಬದಲಾವಣೆಗಳಿಲ್ಲ ಎಂಬುದರ ಅರ್ಥ” ಎಂದು ಹೇಳಿದರು.
ಪಕ್ಷದೊಳಗೆ ಒಬ್ಬೊಬ್ಬರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಬಹುದು ಎಂದ ಅವರು, ಸಿಎಂ ಕುರ್ಚಿ ಬಗ್ಗೆ ಗೊಂದಲ ಇದ್ದಿದ್ದರೆ ಸಿಎಲ್ಪಿ ಸಭೆಯಲ್ಲಿ ಶಾಸಕರು ಪ್ರಶ್ನೆ ಎತ್ತುತ್ತಿದ್ದರು. ಆದರೆ ಯಾರೂ ಆ ಬಗ್ಗೆ ಮಾತನಾಡಿಲ್ಲ. ಅದರಿಂದ ಯಾವುದೇ ಗೊಂದಲ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.
ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, “ಯತೀಂದ್ರ ಅವರಿಗೆ ಅವರದೇ ಆದ ಸೋರ್ಸ್ ಇರಬಹುದು. ಅದನ್ನೇ ಅವರು ಹೇಳಿರಬಹುದು” ಎಂದು ಪ್ರತಿಕ್ರಿಯಿಸಿದರು.



