ಬೆಂಗಳೂರು: ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲು ಸಿಎಂ ಸಿದ್ದರಾಮಯ್ಯ ಇನ್ನೇನು ಒಂದು ದಿನ ದೂರದಲ್ಲಿದ್ದಾರೆ. 7 ವರ್ಷ 239 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ನಾಳೆ ಮುರಿಯಲಿದ್ದಾರೆ.
ಇಂದಿನವರೆಗೆ ಸಿದ್ದರಾಮಯ್ಯ ಕೂಡ 7 ವರ್ಷ 239 ದಿನಗಳ ಆಡಳಿತಾವಧಿ ಪೂರ್ಣಗೊಳಿಸಿದ್ದು, ಮೂರನೇ ಸ್ಥಾನದಲ್ಲಿರುವ ಎಸ್. ನಿಜಲಿಂಗಪ್ಪ (7 ವರ್ಷ 175 ದಿನ), ನಾಲ್ಕನೇ ಸ್ಥಾನದಲ್ಲಿರುವ ರಾಮಕೃಷ್ಣ ಹೆಗಡೆ ಹಾಗೂ ಐದನೇ ಸ್ಥಾನದಲ್ಲಿರುವ ಬಿ.ಎಸ್. ಯಡಿಯೂರಪ್ಪ ಅವರನ್ನು ಹಿಂದಿಕ್ಕಿದ್ದಾರೆ.
ಸಿದ್ದರಾಮಯ್ಯ ಅವರ ಮೊದಲ ಅವಧಿಯ ನಂತರ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಗದ ಕಾರಣ ಜೆಡಿಎಸ್ ಜೊತೆ ಮೈತ್ರಿ ಸರ್ಕಾರ ರಚಿಸಲಾಗಿತ್ತು. ಆದರೆ 14 ತಿಂಗಳಲ್ಲಿ ಸರ್ಕಾರ ಪತನಗೊಂಡಿತು. ಬಳಿಕ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದರು. 2023ರಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿದ ನಂತರ ಸಿದ್ದರಾಮಯ್ಯ ಮತ್ತೆ ಅಧಿಕಾರಕ್ಕೆ ಬಂದರು.
ಲೋಕದಳ ಮತ್ತು ಜನತಾ ದಳದಲ್ಲಿ ರಾಜಕೀಯ ಜೀವನ ಆರಂಭಿಸಿದ್ದ ಸಿದ್ದರಾಮಯ್ಯ, 2006ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ವಿಪಕ್ಷ ನಾಯಕನಾಗಿ ಹಾಗೂ ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಜೆಟ್ ಮಂಡನೆಯಲ್ಲಿ ಸಹ ಅವರು ದಾಖಲೆ ಬರೆದಿದ್ದು, ಇದುವರೆಗೆ 16 ಬಜೆಟ್ ಮಂಡಿಸಿದ್ದಾರೆ.
ಸಿದ್ದರಾಮಯ್ಯ ಹೊಸ ದಾಖಲೆ ಬರೆಯುತ್ತಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಸಂಭ್ರಮಾಚರಣೆಗೆ ಸಜ್ಜಾಗಿದ್ದು, ‘ದೀರ್ಘಾವಧಿ ಸಿಎಂ ಸಿದ್ದರಾಮಯ್ಯ’ ಎಂಬ ಶುಭಾಶಯಗಳ ಬ್ಯಾನರ್‌ಗಳು ಮುಖ್ಯಮಂತ್ರಿಗಳ ಕಾವೇರಿ ನಿವಾಸದ ಬಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಅಳವಡಿಸಲಾಗಿದೆ.



