ವಿಜಯಸಾಕ್ಷಿ ಸುದ್ದಿ, ಗದಗ: ಕೆಆರ್‌ಎಸ್ ಪಕ್ಷದ ಸದಸ್ಯರು ಯಾವುದೇ ಭತ್ಯೆ, ಗೌರವಧನ ಪಡೆಯದೇ ಗ್ಯಾರಂಟಿ ಅನುಷ್ಠಾನ ಸಮಿತಿಯಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಸಿದ್ಧರಿದ್ದೇವೆ. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ತನ್ನ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮಪರ್ಕವಾಗಿ ಅನುಷ್ಠಾನ ಮಾಡಬೇಕೆಂಬ ಉದ್ದೇಶವಿದ್ದರೆ ನಮ್ಮನ್ನು ನೇಮಕ ಮಾಡಿಕೊಂಡು ಸಾರ್ವಜನಿಕರ ಹಣವನ್ನು ಉಳಿಸಲಿ. ಇಲ್ಲ ತಕ್ಷಣವೇ ಈ ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ರದ್ದುಪಡಿಸಲಿ ಎಂದು ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ವೀರನಗೌಡ ಮೂಗನೂರ ಆಗ್ರಹಿಸಿದರು.
ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿ ಮಾಡುವ ಕಾರಣ ನೀಡಿ ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ರಚಿಸಿದೆ. ಸರ್ಕಾರದ ನಿಯಂತ್ರಣದಲ್ಲಿ ಆಡಳಿತ ಇಲ್ಲದಿರುವುದು ಮತ್ತು ಅದನ್ನು ತನ್ನಿಂದ ನಿಯಂತ್ರಿಸಲು ಸಾಧ್ಯವಿಲ್ಲವೆಂದು ಸರ್ಕಾರವೇ ನೇರವಾಗಿ ಹೇಳುತ್ತಿದೆ. ಗ್ಯಾರಂಟಿಗಳನ್ನು ಜಾರಿ ಮಾಡಬೇಕಾದ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ಗ್ಯಾರಂಟಿ ಸಮಿತಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಕ ಮಾಡಲಾಗಿದ್ದು, ಸಮಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳಿಗೆ ಮಾಸಿಕ ವೇತನ ಮತ್ತು ಸದಸ್ಯರುಗಳಿಗೆ ಸಭಾ ಭತ್ಯೆ ನೀಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಅಂದಾಜು 2 ಕೋಟಿ ರೂ ಹೊರೆಯಾಗುತ್ತಿದೆ. ಸರ್ಕಾರದಲ್ಲಿ ಹಣವಿಲ್ಲದೆ ಗ್ಯಾರಂಟಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿಲ್ಲ. ಆದರೆ, ವಾರ್ಷಿಕವಾಗಿ 30 ಕೋಟಿ ರೂಪಾಯಿ ಹಣವನ್ನು ಸರ್ಕಾರ ವೆಚ್ಚ ಮಾಡುತ್ತಿದೆ. ಶಕ್ತಿ ಯೋಜನೆಯ ಭಾಗವಾಗಿ ಸಾರಿಗೆ ನಿಗಮಗಳಿಗೆ 900 ಕೋಟಿಗೂ ಅಧಿಕ ಹಣ ಪಾವತಿಸಬೇಕಿದೆ. ಇನ್ನೂ ಎರಡು ತಿಂಗಳ ಗೃಹಲಕ್ಷ್ಮಿ ಹಣ ತಲುಪಿಲ್ಲ. ಆದರೂ ಕಾಂಗ್ರೆಸ್ ಕಾರ್ಯಕರ್ತರ ಓಲೈಕೆಗೆ ಹಣ ವೆಚ್ಚ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.
ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ಮುಂದುವರೆಸುವುದಾಗಿ ಮತ್ತು ಮುಂದೆಯೂ ಅದು ಇರತ್ತೆದೆಯೆಂದು ಅವರು ಹೇಳಿದ್ದಾರೆ. ಇಷ್ಟು ನಿರ್ಲಜ್ಜೆಯಿಂದ ದುರಾಡಳಿತವನ್ನು ಸಮರ್ಥಿಸಿಕೊಂಡಿರುವುದು ಸಮಂಜಸವಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಾರೂಕ್ ಕಟ್ಟಿಮನಿ, ದೇವೆಂದ್ರ ಬಿ.ಎಲ್, ಬಸವರಾಜ ಅರಗಂಜಿ, ರೇಣುಕಾ ನಾಗಾವಿ, ಸುರೇಶ ಮುಳಗುಂದ ಉಪಸ್ಥಿತರಿದ್ದರು.
ರಾಜ್ಯದ ಕೆರೆ ಅಭಿವೃದ್ಧಿಗಾಗಿ ಒಂದೆರಡು ಕೋಟಿಯ ಯೋಜನೆಗಳಿಗೆ ಹಣ ಇಲ್ಲವೆಂದು ಸರ್ಕಾರ ಪ್ರಸ್ತಾವನೆಗಳನ್ನು ತಿರಸ್ಕರಿಸಿದೆ. ವಿದ್ಯಾರ್ಥಿ ವೇತನ ನೀಡಲು ಹಣವಿಲ್ಲ. ಆದರೆ, ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಲು ಹಣ ಇದೆ. ಇದು ಸಿದ್ದರಾಮಯ್ಯನವರ ದುರಾಡಾಳಿತ ಗ್ಯಾರಂಟಿ ಯೋಜನೆಯಾಗಿದೆ. ಸರ್ಕಾರದ ಆಡಳಿತ ಯಂತ್ರ ಸುಸ್ಥಿಯಲ್ಲಿದೆ. ಶಾಸಕರು ತಮ್ಮ ಕರ್ತವ್ಯವನ್ನು ಸೂಕ್ತವಾಗಿ ನಿಭಾಯಿಸಿದರೆ ಈ ಸಮಿತಿಗಳ ಅಗತ್ಯವೇ ಇರುವುದಿಲ್ಲ. ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆಯು ಸರ್ಕಾರಕ್ಕೆ ತನ್ನ ಆಡಳಿತವನ್ನು ಸುಸ್ಥಿತಿಗೆ ತರುವ ಯಾವ ಆಸಕ್ತಿಯೂ ಇಲ್ಲ ಎಂದು ತೋರಿಸುತ್ತದೆ ಎಂದು ವೀರನಗೌಡ ಮೂಗನೂರ ಹೇಳಿದರು.