ವಿಜಯಸಾಕ್ಷಿ ಸುದ್ದಿ, ಗದಗ : ತಮ್ಮ ತಪಸ್ವಿ ಜೀವನದಿಂದ, ನಿರಂತರ ಅಧ್ಯಯನ ಫಲದಿಂದ, ವಾಣಿಯಲ್ಲಿ ಅಮೃತ ಸಿಂಚನ ಮೂಡಿಸುತ್ತ ಮಹಾ ಬೆಳಕಾಗಿ ಬಾಳಿದ, ಆಧ್ಯಾತ್ಮಿಕ ಪ್ರವಚನ ಪ್ರಪಂಚದಲ್ಲಿ ಪ್ರಖ್ಯಾತರು, ಅವಿಸ್ಮರಣೀಯರಾದ ಶ್ರೀ ಸಿದ್ದೇಶ್ವರ ಶ್ರೀಗಳ ಗುರು ಸ್ಮರಣೆ ಕಾರ್ಯಕ್ರಮ ಫೆ.26ರ ಮುಂಜಾನೆ 11 ಗಂಟೆಗೆ ಎಪಿಎಮ್‌ಸಿ ಪ್ರಾಂಗಣದಲ್ಲಿರುವ ಕೆ.ಎಚ್. ಪಾಟೀಲ ಸಭಾ ಭವನದಲ್ಲಿ ಜರುಗಲಿದೆ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು.
ಶನಿವಾರ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕನ್ನಡ ನಾಡಿದಾದ್ಯಂತ ಅಷ್ಟೇ ಅಲ್ಲದೆ ದೇಶ-ವಿದೇಶದ ವಿವಿಧೆಡೆ ತಮ್ಮ ಪ್ರವಚನಗಳ ಮೂಲಕ ಸಾಮಾನ್ಯ ಜನತೆಗೆ ದಿವ್ಯ ಮಾರ್ಗದರ್ಶನ ಮಾಡಿಸಿದ ಶ್ರೀಗಳು ಅಲ್ಲಮ ಪ್ರಭುದೇವರ ವಚನಗಳ ತಾತ್ಪರ್ಯ ತಿಳಿಸುವ ಅನೇಕ ಗ್ರಂಥಗಳ ರಚನೆ ಮಾಡಿದ್ದು, ಮರೆಯದ ಕಾಣಿಕೆ ನೀಡಿದ್ದಾರೆ.
ಶ್ರೀ ಸಿದ್ದೇಶ್ವರ ಸ್ವಾಮಿಗಳ ಪ್ರವಚನ ಆಲಿಸುವುದು, ಅವರೊಂದಿಗೆ ಒಡನಾಟ ಹೊಂದುವುದು, ಅವರ ಬದುಕನ್ನು ಅವಲೋಕನ ಮಾಡುವುದು, ಅವರ ಸಮಯ ಪಾಲನೆ ಅನುಭವಿಸುವುದು ಹಾಗೂ ಅವರ ಜ್ಞಾನದ ಹರಿವು ಅರಿಯುವುದೊಂದು ಭಾಗ್ಯವಾಗಿದ್ದಿತು. ಗದಗ ಪರಿಸರದಲ್ಲಿ ಅವರು ಅನೇಕ ಉಪನ್ಯಾಸ ನೀಡಿದ್ದು, ನಮ್ಮ ಜನ-ಮನದಲ್ಲಿ ಈಗಲೂ ಹಸಿರಾಗಿದೆ.
ಶ್ರೀ ಸಿದ್ದೇಶ್ವರ ಸ್ವಾಮಿಗಳು ನಮ್ಮನ್ನು ಅಗಲಿದ್ದಾರೆ. ಅವರ ನೆನಪು ನಮಗೆಲ್ಲ ಪ್ರೇರಣಾದಾಯಕವಾಗಿದೆ.
ಅದಕ್ಕಾಗಿ ಅವರನ್ನು ನೆನೆದು-ನಮಿಸಿ, ಸ್ಮರಿಸುವ ಪುಣ್ಯ ಪ್ರಸಂಗದಲ್ಲಿ ತಾವು ಸಕಾಲಕ್ಕೆ ಪಾಲ್ಗೊಳ್ಳಬೇಕೆಂದು ಸಂಘಟಕರಾದ ಡಿ.ಆರ್. ಪಾಟೀಲರು ವಿನಂತಿಸಿದಲ್ಲದೆ, ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಶ್ರೀ ಸಿದ್ದೇಶ್ವರ ಸ್ವಾಮಿಗಳ ಭಾವಚಿತ್ರ ಇರುವ ಅವರ ಅಂತಿಮ ಅಭಿವಂದನಾ ಪತ್ರವನ್ನು ನೀಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಗುರಣ್ಣ ಬಳಗಾನೂರ, ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಇದ್ದರು.