ವಿಜಯಸಾಕ್ಷಿ ಸುದ್ದಿ, ಗದಗ : 70ರ ದಶಕದಲ್ಲಿ ನಾನು ಗದುಗಿನಲ್ಲಿ 6 ವರ್ಷ ಅಧ್ಯಯನ ಮಾಡುವಾಗ ಇಲ್ಲಿ ತೋಂಟದಾರ್ಯ ಮಠ ಇದೆ ಎಂಬ ಸಂಗತಿಯೇ ಅನೇಕರಿಗೆ ಗೊತ್ತಿರಲಿಲ್ಲ. ಆದರೆ, ಲಿಂ.ಸಿದ್ಧಲಿಂಗ ಶ್ರೀಗಳ ಪಾದಾರ್ಪಣೆ ನಂತರ ಈ ಮಠದ ಕೀರ್ತಿ ದೇಶದ ಉದ್ದಗಲಕ್ಕೂ ಹರಡಿತು. ಕೇವಲ ಧಾರ್ಮಿಕತೆಗೆ ಸೀಮಿತವಾಗಿದ್ದ ಈ ಮಠವನ್ನು ಲಿಂಗೈಕ್ಯ ಗುರುಗಳು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಿದರು ಎಂದು ಸಾಹಿತಿ, ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರಣ್ಣ ರಾಜೂರ ನುಡಿದರು.
ಅವರು ಇಲ್ಲಿನ ಜಗದ್ಗುರು ತೋಂಟದಾರ್ಯ ಮಠದಲ್ಲಿ ಲಿಂ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಪೀಠಾರೋಹಣದ ರಜತಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ 2704ನೇ ಶಿವಾನುಭವ ಹಾಗೂ ಡಾ.ತೋಂಟದ ಸಿದ್ಧಲಿಂಗಶ್ರೀ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಲಿಂಗೈಕ್ಯ ಗುರುಗಳಿಗೆ ನುಡಿನಮನ ಸಲ್ಲಿಸಿ ಮಾತನಾಡಿದರು.
ಪೂಜ್ಯರು ಶ್ರೀಮಠದ ಪೀಠಾಧಿಪತಿಯಾಗಿದ್ದ 44 ವರ್ಷಗಳಲ್ಲಿ ನೂರು ವರ್ಷಗಳಿಗಾಗುವಷ್ಟು ಸಾಧನೆಯನ್ನು ಮಾಡಿ ತೋರಿಸಿದ್ದು, ಸಮಾಜಸೇವೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಹೀಗೆ ಅನೇಕ ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆ ತಂದಿದ್ದಾರೆ. ಅವರು ಆರಂಭಿಸಿದ ಶಿವಾನುಭವ ಕಾರ್ಯಕ್ರಮಗಳು ಅಪೂರ್ವ ದಾಖಲೆಯಾಗಿದ್ದು, ಎಲ್ಲ ಜಾತಿ-ಜನಾಂಗಗಳ ಮಾನವೀಯ ಮೌಲ್ಯಗಳ ಕುರಿತು ಈ ವೇದಿಕೆಯಲ್ಲಿ ಚರ್ಚೆಗಳು ನಡೆದಿವೆ. ಶ್ರೀಗಳ ಪುಸ್ತಕಪ್ರೇಮ ನಮಗೆಲ್ಲ ಮಾದರಿಯಾಗಿದ್ದು, ಅವರನ್ನು ನೆನೆಯುವುದೇ ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.
ಖ್ಯಾತ ಪತ್ರಕರ್ತರಾದ ಡಾ.ವಿಲಾಸ ನಾಂದೋಡ್ಕರ ಹಾಗೂ ರಘುನಾಥ ಚ.ಹ ಅವರಿಗೆ `ಡಾ.ತೋಂಟದ ಸಿದ್ಧಲಿಂಗಶ್ರೀ’ ಪುರಸ್ಕಾರ ಪ್ರದಾನ ಮಾಡಲಾಯಿತು. ಡಾ.ವಿಲಾಸ ನಾಂದೋಡ್ಕರ ಮಾತನಾಡಿ, ಮಠಗಳು ಎಂದ ತಕ್ಷಣ ನಮಗೆ ಮೊದಲು ನೆನಪಾಗುವುದೇ ತೋಂಟದಾರ್ಯ ಮಠ. ಲಿಂಗೈಕ್ಯ ಗುರುಗಳು ಈ ಮಠವನ್ನು ಮಾದರಿಯಾಗುವಂತೆ ಬೆಳೆಸಿದ್ದಾರೆ. ಕಪ್ಪತಗುಡ್ಡವನ್ನು ಭೂದಾಹಿಗಳು ಕಬಳಿಸಲು ಯತ್ನಿಸಿದಾಗ ಅದರ ರಕ್ಷಣೆ ಬಯಸಿದ್ದ ನಮಗೆಲ್ಲ ಪ್ರೇರಕಶಕ್ತಿಯಾಗಿದ್ದವರೇ ತೋಂಟದ ಸಿದ್ಧಲಿಂಗ ಶ್ರೀಗಳು. ಅವರ 50ನೇ ವರ್ಷದ ಪಟ್ಟಾಧಿಕಾರ ಸಂದರ್ಭದಲ್ಲಿ ಅವರ ಹೆಸರಿನ ಪುರಸ್ಕಾರ ದೊರೆತಿರುವುದು ನನ್ನ ಪುಣ್ಯ ಎಂದರು.
ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ರುದ್ನೂರಿನ ತೋಂಟದಾರ್ಯ ಶಾಖಾಮಠಕ್ಕೆ ಉತ್ತರಾಧಿಕಾರಿಗಳಾಗಿ ಆಯ್ಕೆಯಾಗಿರುವ ಪೂಜ್ಯ ಚೆನ್ನಮಲ್ಲಿಕಾರ್ಜುನ ದೇವರನ್ನು ಸನ್ಮಾನಿಸಲಾಯಿತು.
ಡಾ.ತೋಂಟದ ಸಿದ್ಧಲಿಂಗಶ್ರೀ ಪುರಸ್ಕಾರ ಸಮಿತಿಯ ಸಿದ್ದು ಸತ್ಯಣ್ಣವರ ಹಾಗೂ ಪದಾಧಿಕಾರಿಗಳು, ರಾಜೇಶ ಹಾಗೂ ಗಿರೀಶ ಈಶ್ವರಪ್ಪ ಮಾನ್ವಿ ದಾಸೋಹ ಸೇವೆ ವಹಿಸಿದ್ದರು. ಶಶಿಕುಮಾರ ಬಂಡಿ ಧರ್ಮಗ್ರಂಥ ಪಠಿಸಿದರೆ, ರೋಹಿತ ತೊಂಡಿಹಾಳ ವಚನ ಚಿಂತನಗೈದರು.
ಗುರುಮಠಕಲ್‌ನ ಶಾಂತವೀರ ಮುರುಘರಾಜೇಂದ್ರ ಶ್ರೀಗಳು, ನೇರಡಗಂಬಾ ಸಿದ್ಧಲಿಂಗೇಶ್ವರ ಮಠದ ಪಂಚಮ ಸಿದ್ಧಲಿಂಗೇಶ್ವರ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು. ವೇದಿಕೆ ಮೇಲೆ ರುದ್ನೂರು ತೋಂಟದ ಸಿದ್ಧೇಶ್ವರ ಸಮಿತಿಯ ಅಧ್ಯಕ್ಷ ಶಿವರಾಜ ಪಾಟೀಲ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಿ.ಇ.ಓ ಮಲ್ಲಿಕಾರ್ಜುನ ಶೆಲ್ಲಿಕೇರಿ, ಮಾಜಿ ಸಚಿವರಾದ ಎಸ್.ಎಸ್. ಪಾಟೀಲ ಇದ್ದರು.
ಪ್ರಶಸ್ತಿ ಪುರಸ್ಕೃತ ಖ್ಯಾತ ಪತ್ರಕರ್ತ ರಘುನಾಥ ಚ.ಹ ಮಾತನಾಡಿ, ಮಾಧ್ಯಮಗಳನ್ನು ಹಾಗೂ ಧಾರ್ಮಿಕ ಸಂಸ್ಥೆಗಳನ್ನು ಜನರು ಅನುಮಾನದಿಂದ ನೋಡುತ್ತಿರುವ ವಿಷಮ ಪರಿಸ್ಥಿತಿ ಇದು. ಇಂಥ ಸಂಕೀರ್ಣ ಸಮಯದಲ್ಲಿ ಮಠಗಳು ಹಾಗೂ ಮಾಧ್ಯಮಗಳು ಸಮಾಜದ ಆರೋಗ್ಯವನ್ನು ಕಾಪಾಡಲು ಪ್ರಜ್ಞಾಪೂರ್ವಕವಾಗಿ ಕಾರ್ಯನಿರ್ವಹಿಸಬೇಕಿದೆ. ಕಪ್ಪತಗುಡ್ಡದ ಪರಿಸರದಲ್ಲಿ ಲಿಂಗೈಕ್ಯ ಪೂಜ್ಯರ ಜೀವಂತಿಕೆ ಇದೆ. ಅವರ ಆಶಯಗಳನ್ನು ಅರ್ಥಪೂರ್ಣವಾಗಿ ಮುಂದಿನ ತಲೆಮಾರಿಗೆ ದಾಟಿಸಬೇಕಿದ್ದು, ಈ ಪ್ರಶಸ್ತಿ ನನಗೆ ಸಂದ ಗೌರವವಲ್ಲ, ಬದಲಿಗೆ ನಾನು ಕೆಲಸ ನಿರ್ವಹಿಸುವ ಸಂಸ್ಥೆಗೆ ಸಂದ ಗೌರವ ಎಂದರು.