ವಿಜಯಸಾಕ್ಷಿ ಸುದ್ದಿ, ಗದಗ: ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆ ಸಭಾಪತಿ ಬಸವರಾಜ ಹೊರಟ್ಟಿಯವರ ನೆರವಿನಿಂದ ಕಳೆದ ಎರಡು ವರ್ಷಗಳಲ್ಲಿ ತನ್ನ ಕಳೆಯನ್ನು ಹೆಚ್ಚಿಸಿಕೊಂಡು ಖಾಸಗಿ ಶಾಲೆಗಳನ್ನು ಮೀರುವಂತೆ ಬೆಳೆದು ನಿಂತಿದೆ. ಇಲ್ಲಿನ ಶಾಲಾ ಆವರಣಕ್ಕೆ ಬಂದರೆ ಮಂದಿರ, ಮಸೀದಿ, ಚರ್ಚಗೆ ಬಂದಂತೆ ಆಗುತ್ತದೆ. ಅಂತಹ ವಾತಾವರಣವನ್ನು ಇಲ್ಲಿ ಕಂಡು ನಾನು ಮೂಕವಿಸ್ಮಿತನಾದೆ ಎಂದು ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಅವ್ವ ಸೇವಾ ಟ್ರಸ್ಟ್ನವರು ಪ್ರಕಟಿಸಿದ `ಯಶಸ್ಸಿನಡೆಗೆ ವಿದ್ಯಾರ್ಥಿಗಳ ನಡಿಗೆ’ ಕುರಿತ ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸರಕಾರಿ ಪ್ರೌಢಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಆದರೆ ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯನ್ನು ನೋಡಿದಾಗಿ 450ಕ್ಕೂ ಹೆಚ್ಚು ಮಕ್ಕಳನ್ನು ಹೊಂದುವ ಮೂಲಕ ಎಲ್ಲ ಮೂಲಭೂತ ಸೌಕರ್ಯಗಳನ್ನು ಹೊಂದಿ ಹೈಟೆಕ್ ಸರಕಾರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಿಲ್ಲೆಯಲ್ಲಿಯೇ ಒಂದು ಮಾದರಿ ಪ್ರೌಢಶಾಲೆಯಾಗಿದೆ. ಈ ಎಲ್ಲ ಶ್ರೇಯಸ್ಸು ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ಹಾಗೂ ಡಾ. ಬಸವರಾಜ ಧಾರವಾಡ ಅವರಿಗೆ ಸಲ್ಲಬೇಕು ಎಂದು ಹೇಳಿದರು.
ಶಾಲಾ ದತ್ತು ಉಸ್ತುವಾರಿಯ ಮಾರ್ಗದರ್ಶಕರಾದ ಡಾ. ಬಸವರಾಜ ಧಾರವಾಡ ಮಾತನಾಡಿ, ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ವಿವಿಧ ಜನಪ್ರತಿನಿಧಿಗಳ ಮತ್ತು ಹಲವಾರು ದಾನಿಗಳ ಸಹಕಾರದಿಂದ ಈ ಶಾಲೆಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವಾಗಿದೆ. ಅವರ ಎಲ್ಲ ಸಹಕಾರವನ್ನು ನೆನೆಯುವುದಾಗಿ ಹೇಳಿದರು.
ಅಕ್ಷರ ದಾಸೋಹದ ಸಹಾಯಕ ಅಧಿಕಾರಿಗಳಾದ ಶಂಕರ ಹಡಗಲಿ ಹಾಗೂ ಪ್ರಭಾರಿ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಿ ಅಣ್ಣಿಗೇರಿ ಮುಂತಾದವರು ಮಾತನಾಡಿದರು. ಅಥಣಿ ಮೋಟಗಿ ಮಠದದವರು ಕೊಡಮಾಡುವ ಸಮಾಜಸೇವಾ ಭೂಷಣ ಪ್ರಶಸ್ತಿಗೆ ಪಾತ್ರರಾದ ಶಿವಾನಂದ ಪಟ್ಟಶೆಟ್ಟರ ಹಾಗೂ ಶಂಕರ ಹಡಗಲಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶಾಮ ಲಾಂಡೆ, ಶಿಕ್ಷಣ ಸಂಯೋಜಕ ಆಯ್.ಬಿ. ಮಡಿವಾಳರ, ಶಂಕ್ರಮ್ಮ ಆರ್.ಹಣಮಗೌಡ್ರು, ಎಂ.ಐ. ಶಿವನಗೌಡ್ರು, ಮಂಜುಳಾ ಪಿ.ಸಾಮ್ರಾಣಿ, ಸುಮಂಗಲಾ ಎಂ.ಪತ್ತಾರ್, ಶಾರದಾ ಬಾಣದ, ಶೋಭಾ ಎಸ್.ಗಾಳಿ, ರಮೇಶ್ ಬಸರಿ, ಸಾವಿತ್ರಿ ಎ.ಗದ್ದನಕೇರಿ, ಎನ್.ಆರ್. ಶಿರೋಳ್, ಸಬಿಯಾ ಯು.ಕುಷ್ಟಗಿ, ಗಂಗಾ ಎಂ.ಅಳವಂಡಿ, ಮಂಜುಳಾ ಟಿ, ಪದ್ಮಾ ವಿ.ದಾಸರ್, ಲಕ್ಷ್ಮಮ್ಮ ಮಾಳೋತ್ತರ್, ಶಶಿಕಲಾ ಬಿ.ಗುಳೇದವರ, ಸಂಜೀವಿನಿ ಕೂಲಗುಡಿ ಮುಂತಾದವರು ಉಪಸ್ಥಿತರಿದ್ದರು. ಶಾರದಾ ಬಾಣದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರವೀಂದ್ರ ಶೆಟ್ಟೆಪ್ಪನವರ ಮಾತನಾಡಿ, ಕಣ್ಣು ಚದುರಿದರೆ ಗುರಿ ಮಾತ್ರ ತಪ್ಪುತ್ತದೆ. ಆದರೆ ಮನಸ್ಸು ಚದುರಿದರೆ ಜೀವನದ ಹಾದಿ ತಪ್ಪುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ಅಧ್ಯಯನದ ಹಾದಿಯಲ್ಲಿ ಸಾಗಬೇಕು. ಇಲ್ಲಿ ಸುಂದರ ಕಲಿಕಾ ವಾತಾವರಣವಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆಯ್ಕೆಯಾದ ಶಿಕ್ಷಕವೃಂದ ಇದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದರು.