ವಿಜಯಸಾಕ್ಷಿ ಸುದ್ದಿ, ಗದಗ: ನಾಡು-ನುಡಿ, ನೆಲ-ಜಲ, ಭಾಷೆ-ಧರ್ಮಗಳಿಗೆ ಚ್ಯುತಿ ಬಂದಾಗಲೆಲ್ಲ ಅವುಗಳ ಶ್ರೇಯೋಭಿವೃದ್ಧಿಯ ಹೋರಾಟಕ್ಕಾಗಿ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಮೊದಲು ಮುನ್ನುಗ್ಗುತ್ತಿದ್ದರು. ಗೋಕಾಕ ಚಳುವಳಿ, ನಂಜುಂಡಪ್ಪ ವರದಿ ಜಾರಿ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಶ್ರೀಗಳ ಹೋರಾಟ ಶ್ರಮದಿಂದ ಇಂದು ಕನ್ನಡಕ್ಕೆ ಹೆಚ್ಚಿನ ಮಾನ್ಯತೆ ದೊರೆತಿದೆ. ಗದಗ ಜಿಲ್ಲೆಗೆ ಪೋಸ್ಕೋ ಕಂಪನಿ ಬಾರದಂತೆ ಶ್ರೀಗಳು ಹೋರಾಟ ಮಾಡಿದ್ದರ ಫಲವಾಗಿ ಕಪ್ಪತ್ತಗುಡ್ಡ ಸಂರಕ್ಷಣೆಯಾಗಿ ಇಂದು ನಾವೆಲ್ಲ ಶುದ್ಧಗಾಳಿ ಸೇವಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಮನುಕುಲದ ಬೆಳಕು, ಲಿಂಗಾಯತ ಧರ್ಮದ ಮಹಾ ದಂಡನಾಯಕ ಪೂಜ್ಯ ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಎಂದು ನಿವೃತ್ತ ಮುಖ್ಯೋಪಾಧ್ಯಾಯ ಶಿವನಗೌಡ ಗೌಡರ ತಿಳಿಸಿದರು.
ಇಲ್ಲಿನ ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆ ಗದಗ ಸಂಸ್ಥೆಯ ಸಿದ್ಧಲಿಂಗ ನಗರದಲ್ಲಿನ ಬಸವ ಪ್ರಭೆ ಕ್ಯಾಂಪಸ್‌ನಲ್ಲಿರುವ ಬಸವ ಭವನದಲ್ಲಿ ಪೂಜ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ 7ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಾಟೀಲ ಮಾತನಾಡಿ, ತೋಂಟದ ಸಿದ್ಧಲಿಂಗ ಶ್ರೀಗಳ ಒಡನಾಟದಲ್ಲಿದ್ದ ಅನೇಕ ಸಂಗತಿಗಳನ್ನು ಸಭೆಯಲ್ಲಿ ಹಂಚಿಕೊಂಡು, `ತ್ರಿವಿಧ ದಾಸೋಹ’ ಪದದ ಅರ್ಥವನ್ನು ಅರ್ಥೈಸಿಕೊಂಡು ಕೃತಿ ಮೂಲಕ ಜನತೆಗೆ ಅರ್ಥೈಸಿದವರಲ್ಲಿ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಅಗ್ರಮಾನ್ಯರಾಗಿದ್ದಾರೆ. ಇಂದು ಶ್ರೀಮಠದಲ್ಲಿ ನಡೆಯುತ್ತಿರುವ ಅನ್ನದಾಸೋಹ, ಶ್ರೀಮಠದ ವಿವಿಧ ಶಿಕ್ಷಣ ಸಂಸ್ಥೆಗಳಿಂದ ನಡೆಯುತ್ತಿರುವ ಅಕ್ಷರ ದಾಸೋಹ, ಶ್ರೀಮಠದ ಯೋಗ ಪಾಠಶಾಲೆಯಿಂದ ದಿನನಿತ್ಯ ನಡೆಯುತ್ತಿರುವ ಯೋಗ ತರಬೇತಿ ವರ್ಗಗಳಿಂದ ಆರೋಗ್ಯ ದಾಸೋಹ ಸೇವೆಗಳು ಅನ್ನ, ಅಕ್ಷರ, ಆರೋಗ್ಯ ಎಂಬ ತ್ರಿವಿಧ ದಾಸೋಹ ಪದಕ್ಕೆ ನಿದರ್ಶನಗಳಾಗಿವೆ. ಪೂಜ್ಯ ಸಿದ್ಧಲಿಂಗ ಶ್ರೀಗಳ ಸಂಕಲ್ಪಗಳನ್ನು ಯಶಸ್ವಿಗೊಳಿಸಲು ನಾವೆಲ್ಲ ಶ್ರಮಿಸಿದರೆ ನಿತ್ಯವೂ ಅವರನ್ನು ಸ್ಮರಿಸಿದಂತಾಗುವುದೆಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಯೋಗ ಪಾಠಶಾಲೆಯ ಅಭಿವೃದ್ಧಿ ಸೇವಾ ಸಮಿತಿ ಸದಸ್ಯರಾದ ಡಾ. ಎಂ.ವಿ. ಐಹೊಳ್ಳಿ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಕೋಶಾಧ್ಯಕ್ಷೆ ಜಯಶ್ರೀ ಡಾವಣಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪೂಜ್ಯರ ಅಭಿಮಾನಿ ಭಕ್ತವೃಂದ, ನಿತ್ಯ ಯೋಗಾಭ್ಯಾಸಿ ವಿದ್ಯಾರ್ಥಿಗಳು, ಯೋಗ ಪಾಠಶಾಲೆಯ ಸದಸ್ಯರು ಪಾಲ್ಗೊಂಡಿದ್ದರು.
ಬಸವೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಸಹ ಶಿಕ್ಷಕರಾದ ಬಿ.ಬಿ. ಇಬ್ರಾಹಿಂಪೂರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಇತ್ತೀಚೆಗೆ ಬಸವ ಸಂಸ್ಕೃತಿ ಅಭಿಯಾನ’ದಲ್ಲಿ ಸಿದ್ಧಲಿಂಗ ಶ್ರೀಗಳ ಮತ್ತು ಇಲಕಲ್ ಮಹಾಂತಪ್ಪಗಳ ಹೆಸರನ್ನು ಪ್ರಸ್ತಾಪಿಸದಿರುವುದು ನೋವಿನ ಸಂಗತಿಯಾಗಿದೆ. ಕಾರಣ ಲಿಂಗಾಯತ’ ಒಂದು ಸ್ವತಂತ್ರ ಧರ್ಮ. ಅದು ಅಲ್ಪಸಂಖ್ಯಾತರ ಧರ್ಮ ಎಂಬ ಹೋರಾಟಕ್ಕೆ ಕಾರಣೀಕರ್ತರಾದವರು ಇಲಕಲ್ ಮಹಾಂತಪ್ಪಗಳು ಮತ್ತು ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮಿಗಳು. ಹೀಗಾಗಿ ಇವರೀರ್ವರ ಸ್ಮರಣೆ ಸದಾ ಇರಬೇಕೆಂಬುದು ನನ್ನ ಆಶಯವಾಗಿದೆ. ತಮ್ಮೆಲ್ಲರ ಭಾವ ಕೂಡ ಇದಾಗಬೇಕೆಂದು ಶಿವನಗೌಡ ಗೌಡರ ವಿನಂತಿಸಿದರು.