ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2025ನೇ ಸಾಲಿನ 70ನೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಮುಳಗುಂದ ಪಟ್ಟಣದ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ ವೀರಪ್ಪ ದೇವಪ್ಪ ಸಿದ್ದನಗೌಡರ ಆಯ್ಕೆಯಾಗಿದ್ದಾರೆ.
ವೀರಪ್ಪ ಸಿದ್ದನಗೌಡರು 2016ರಲ್ಲಿ ಹೊಸ ದಿಗಂತ ಪತ್ರಿಕೆಯಿಂದ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಮುಳಗುಂದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ. 1ರ ಎಸ್‌ಡಿಎಂಸಿ ಅಧ್ಯಕ್ಷರಾಗಿ ಶಾಲೆಯ ಸಂಪೂರ್ಣ ಅಭಿವೃದ್ಧಿಯ ಹರಿಕಾರರಾಗಿದ್ದು, ಪತ್ರಿಕಾ ಧರ್ಮವನ್ನು ಉಸಿರಾಗಿಸಿಕೊಂಡು ತಮ್ಮ ಬರವಣಿಗೆ ಮೂಲಕ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಸಾಕಷ್ಟು ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮುಳಗುಂದ ಘಟಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರ ಸೇವೆಯನ್ನು ಗುರುತಿಸಿ 2025ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


