ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಹಾಗೂ ಇಂದು ಮುಂಜಾನೆ ಸುರಿಯುತ್ತಿರುವ ಭಾರೀ ಮಳೆಗೆ ಸಾಕಷ್ಟು ಅವಾಂತರ ಸೃಷ್ಟಿ ಆಗಿದೆ. ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್‌ನಲ್ಲಿ ನೀರು ನಿಂತ ಹಿನ್ನೆಲೆಯಲ್ಲಿ ಸಂಚಾರವನ್ನೇ ಬಂದ್ ಮಾಡಲಾಗಿದೆ.
ಧಾರಾಕಾರ ಮಳೆಗೆ ಬೆಂಗಳೂರು ತತ್ತರವಾಗಿದ್ದು, ಮೆಜೆಸ್ಟಿಕ್, ಕೆ ಆರ್ ಮಾರುಕಟ್ಟೆ, ಜಯನಗರ, ವಿಜಯನಗರ, ಚಂದ್ರಲೇಔಟ್, ರಾಜಾಜಿನಗರ, ಆರ್ ಟಿ ನಗರ, ಹೆಬ್ಬಾಳ, ಕೋರಮಂಗಲ, ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ, ನಾಗರಬಾವಿ, ಯಶವಂತಪುರ, ಪೀಣ್ಯ, ಬೊಮ್ಮನ ಹಳ್ಳಿ, ನಾಯಂಡಹಳ್ಳಿ, ಕುಮಾರಸ್ವಾಮಿ ಲೇಔಟ್, ಆರ್ ಆರ್ ನಗರ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗಿದೆ.
ಚಾಮರಾಜಪೇಟೆಯ ಶಿರಸಿ ವೃತ್ತದ ಬಳಿ ದೊಡ್ಡ ಮರ ರಸ್ತೆಗೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ವಾಹನ ಸಿಲುಕಿಲ್ಲ, ಪ್ರಾಣಾಪಾಯವಾಗಿಲ್ಲ. ಮತ್ತೆ ಸಾಯಿ ಲೇಔಟ್ ಜನರು ಸಂಕಷ್ಟ ಅನುಭವಿಸಿದ್ದು, ರಾತ್ರಿಯಿಡೀ ಸುರಿದ ಮಳೆಗೆ ಲೇಔಟ್ ಪೂರ್ತಿ ಜಲಾವೃತವಾಗಿದೆ.
ಇನ್ನೂ ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಆಗಾಗ್ಗೆ ಮಳೆ ಸುರಿಯುತ್ತಿದೆ. ಭಾನುವಾರ ಸಂಜೆ ಹಾಗೂ ರಾತ್ರಿ ಕೂಡ ಚಾಮರಾಜಪೇಟೆ, ಜಯನಗರ, ವಿಜಯನಗರ, ಮೆಜೆಸ್ಟಿಕ್, ಸಿಟಿ ಮಾರ್ಕೆಟ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಅಷ್ಟೇ ಅಲ್ಲದೆ, ರಾತ್ರಿಯಿಡೀ ಮಳೆ ಸುರಿದಿದೆ. ಇದರಿಂದ ಸಿಟಿ ಮಂದಿ ಅಕ್ಷರಶಃ ನಲುಗಿ ಹೋಗಿದ್ದಾರೆ.