ಬೆಂಗಳೂರು: ಮಹಿಳೆಯರಿಗೆ ಉದ್ಯೋಗ ಹಾಗೂ ವಾಸಕ್ಕೆ ಅತ್ಯಂತ ಅನುಕೂಲಕರ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ.
ಅವತಾರ್ ಗ್ರೂಪ್ ಬಿಡುಗಡೆ ಮಾಡಿದ ‘ಟಾಪ್ ಸಿಟೀಸ್ ವಿಮೆನ್ ಇನ್ ಇಂಡಿಯಾ’ ಸಮೀಕ್ಷಾ ವರದಿಯಲ್ಲಿ, ದೇಶದ 125 ನಗರಗಳನ್ನು ಅಧ್ಯಯನ ಮಾಡಿ ಸಿದ್ಧಪಡಿಸಿದ ಪಟ್ಟಿಯಲ್ಲಿ ಬೆಂಗಳೂರು 53.29 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದೆ.
ಮಹಿಳೆಯರ ಉದ್ಯೋಗ ಪಾಲ್ಗೊಳ್ಳುವಿಕೆ, ಸುರಕ್ಷತೆ, ವೃತ್ತಿ ಅಭಿವೃದ್ಧಿ ಹಾಗೂ ಸಾಮಾಜಿಕ–ಆರ್ಥಿಕ ಸೌಲಭ್ಯಗಳನ್ನು ಆಧಾರವಾಗಿ ನಗರಗಳಿಗೆ ‘ಸಿಟಿ ಇನ್‌ಕ್ಲೂಷನ್ ಸ್ಕೋರ್’ ನೀಡಲಾಗಿದೆ. ತಂತ್ರಜ್ಞಾನ ಮತ್ತು ಸೇವಾ ಕ್ಷೇತ್ರಗಳಲ್ಲಿ ಹೆಚ್ಚಾದ ಉದ್ಯೋಗಾವಕಾಶಗಳು ಹಾಗೂ ಮಹಿಳಾ ಸ್ನೇಹಿ ಕೆಲಸದ ವಾತಾವರಣ ಬೆಂಗಳೂರು ಮೊದಲ ಸ್ಥಾನ ಪಡೆಯಲು ಕಾರಣವಾಗಿದೆ.
ಈ ಪಟ್ಟಿಯಲ್ಲಿ ಚೆನ್ನೈ ಎರಡನೇ ಸ್ಥಾನ ಪಡೆದರೆ, ಪುಣೆ, ಹೈದರಾಬಾದ್ ಮತ್ತು ಮುಂಬೈ ಮುಂದಿನ ಸ್ಥಾನಗಳಲ್ಲಿವೆ. ಕೈಗಾರಿಕಾ ಬೆಳವಣಿಗೆ ಮಾತ್ರ ಮಹಿಳಾ ಸ್ನೇಹಿ ನಗರ ನಿರ್ಮಾಣಕ್ಕೆ ಸಾಕಾಗುವುದಿಲ್ಲ ಎಂಬುದನ್ನೂ ಈ ವರದಿ ಸ್ಪಷ್ಟಪಡಿಸಿದೆ.



