ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಆಗಸ್ಟ್ 4ರಂದು ಬೆಳ್ಳಿ ರಥೋತ್ಸವ ಜರುಗಲಿದೆ. ಪ್ರತಿವರ್ಷ ಶ್ರಾವಣ ಮಾಸದ 2ನೇ ಸೋಮವಾರ ಮಹಿಳೆಯರೇ ಬೆಳ್ಳಿ ರಥ ಎಳೆಯುವುದು ವಿಶೇಷವಾಗಿದೆ.
ತೇರು ಎಳೆಯವುದು ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಲಿಂ. ಗುರು ಅನ್ನದಾನ ಶಿವಯೋಗಿಗಳವರ ಪುಣ್ಯಸ್ಮರಣೋತ್ಸವದ ನಿಮಿತ್ತ ಲಿಂ. ಡಾ. ಅಭಿನವ ಅನ್ನದಾನ ಸ್ವಾಮೀಜಿಗಳು 2005ರಲ್ಲಿ 165 ಕೆಜಿ ತೂಕದ ಬೆಳ್ಳಿ ರಥ ನಿರ್ಮಿಸಿದರು. ಕಳೆದ 20 ವರ್ಷಗಳಿಂದ ಮಹಿಳೆಯರು ಬೆಳ್ಳಿ ತೇರು ಎಳೆಯುತ್ತಿದ್ದಾರೆ. ಈ ತೇರಿಗೆ ಹೂವನ್ನು ಮಾತ್ರ ಎಸೆಯಲಾಗುತ್ತದೆ. ರಥೋತ್ಸವದಲ್ಲಿ ನಾಡಿನ ಸುತ್ತಲಿನ ಜಿಲ್ಲೆಗಳ ಮಹಿಳೆಯರೂ ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.
ಆಗಸ್ಟ್ 3ರಂದು ಬೆಳಿಗ್ಗೆ 10 ಗಂಟೆಗೆ ನಿಡಗುಂದಿಕೊಪ್ಪ ಶಾಖಾ ಶಿವಯೋಗಮಂದಿರದ ಅಭಿನವ ಚನ್ನಬಸವ ಸ್ವಾಮೀಜಿಗಳವರಿಂದ ಷಟಸ್ಥಲ ಧ್ವಜಾರೋಹಣ, ಮದ್ಯಾಹ್ನ 12 ಗಂಟೆಗೆ ಮಹಾಗಣಾರಾಧನೆ, ಸಂಜೆ 7 ಗಂಟೆಗೆ ಪುಣ್ಯಸ್ಮರಣೋತ್ಸವ ಮತ್ತು ಆಧ್ಯಾತ್ಮ ಪ್ರವಚನ ಮಂಗಲೋತ್ಸವ ಜರುಗಲಿದ್ದು, ನಂದವಾಡಗಿ ಶ್ರೀ ಮಹಾಂತೇಶ್ವರ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ಧರ್ಮ ಸಭೆಯಲ್ಲಿ ನಾಡಿನ ಹರ-ಗುರು-ಚರ ಮೂರ್ತಿಗಳು ಭಾಗವಹಿಸಲಿದ್ದಾರೆ. ಶಾಸಕ ಜಿ.ಎಸ್. ಪಾಟೀಲ, ಮಾಜಿ ಸಚಿವ ಕಳಕಪ್ಪ ಬಂಡಿ, ಗ್ರಾ.ಪಂ ಅಧ್ಯಕ್ಷ ಗಿರೀಶಗೌಡ ಮುಲ್ಕಿಪಾಟೀಲ ಪಾಲ್ಗೊಳ್ಳಲಿದ್ದಾರೆ.
ಆಗಸ್ಟ್ 4ರಂದು ಬೆಳಿಗ್ಗೆ 8.30ಕ್ಕೆ ಶ್ರೀ ಮುಪ್ಪಿನಬಸವಲಿಂಗ ಸ್ವಾಮೀಜಿಯವರಿಂದ ಮಕ್ಕಳಿಗಾಗಿ ವಿದ್ಯಾರಂಭ ಜರುಗಲಿದೆ. ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಧಾರವಾಡ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್‌ವತಿಯಿಂದ ಉಚಿತ ಹೃದಯ ರೋಗ ತಪಾಸಣೆ ಶಿಬಿರ ಜರುಗಲಿದೆ. ಬೆಳಿಗ್ಗೆ 11 ಗಂಟೆಗೆ 501 ಮುತ್ತೈದೆಯರ ಉಡಿ ತುಂಬುವ ಸಮಾರಂಭ, ಮರಳಿ ಮಣ್ಣಿಗೆ ಜನಜಾಗೃತಿ ಅಭಿಯಾನಕ್ಕೆ ಪ್ರಗತಿಪರ ರೈತ ಮಹಿಳೆ ಸುನಂದಮ್ಮ ಗದ್ದಿಕೇರಿ ಚಾಲನೆ ನೀಡುವರು.
ಸಂಜೆ 5 ಗಂಟೆಗೆ ಬೆಳ್ಳಿ ರಥೋತ್ಸವವು ಸಾವಿರಾರು ಮಹಿಳೆಯರ ಸಮ್ಮುಖದಲ್ಲಿ ಜರುಗಲಿದ್ದು, ಧಾರವಾಡದ ಜಿಲ್ಲಾಧಿಕಾರಿ ದಿವ್ಯ ಪ್ರಭು ಚಾಲನೆ ನೀಡುವರು. ಬೆತ್ತದ ಅಜ್ಜ ಕಿರುಚಿತ್ರದ ಲೋಕಾರ್ಪಣೆ ಜರುಗಲಿದೆ. ಸಂಜೆ 6 ಗಂಟೆಗೆ ಶಿವಾನುಭವಗೋಷ್ಠಿ ಜರುಗಲಿದ್ದು, ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ, ಸಂತೆಕಲ್ಲೂರ ಘನಮಠೇಶ್ವರಮಠದ ಗುರುಬಸವ ಸ್ವಾಮೀಜಿ ನೇತೃತ್ವ ವಹಿಸುವರು.
ಇದೇ ಸಂದರ್ಭದಲ್ಲಿ ಹಿರಿಯ ತಾಯಂದಿರ ಸನ್ಮಾನ ಜರುಗಲಿದೆ. ಅಂಗ ಸಂಸ್ಥೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಗದುಗಿನ ಎಸ್.ಎಸ್. ಸಾರಂಗಮಠ ವಿರಚಿತ ನಾಟಕ `ಹಾಲಕೆರೆಯ ಶ್ರೀ ಮಹಾತಪಸ್ವಿ ಅನ್ನದಾನೇಶ್ವರ ಮಹಿಮೆ‘, ಲಿಂಗಸಗೂರಿನ ಗಿರಿರಾಜ ಹೊಸಮನಿ ವಿರಚಿತ `ಹಾಲಕೆರೆಯಿಂದ ಹಿಮಾಲಯದವರೆಗೆ ಶ್ರೀ ಹಿರಿಯ ಅನ್ನದಾನ ಸ್ವಾಮೀಜಿಗಳ ಚರಿತಾಮೃತ‘ ಕೃತಿಗಳು ಬಿಡುಗಡೆಯಾಗಲಿವೆ. ಲೀಲಾ ಕಾರಟಗಿ ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಮಹಿಳೆಯ ಪಾತ್ರ ಕುರಿತು ಉಪನ್ಯಾಸ ನೀಡುವರು. ರೋಣದ ಅನ್ನಪೂರ್ಣ ಪಾಟೀಲ, ಗಜೇಂದ್ರಗಡದ ಸಂಯುಕ್ತ ಬಂಡಿ ಸೇರಿದಂತೆ ಇತರರು ಆಗಮಿಸಲಿದ್ದಾರೆ.