ವಿಜಯಸಾಕ್ಷಿ ಸುದ್ದಿ, ಗದಗ : ಮನುಷ್ಯನಿಗೆ ಹಾಸ್ಯ ಪ್ರಜ್ಞೆ ಇರಬೇಕು. ದೇವರು ಮನುಷ್ಯನಿಗೆ ನಗುವೆಂಬ ಆಭರಣವನ್ನು ನೀಡಿದ್ದಾನೆ. ಅದನ್ನು ಸಮಯಕ್ಕನುಸಾರವಾಗಿ ಬಳಸಿಕೊಳ್ಳದೆ ಹೋದರೆ ಬದುಕು ದುಸ್ತರವಾಗುತ್ತದೆ ಎಂದು ನಗೆ ಭಾಷಣಕಾರ ಅರುಣ ಬಿ.ಕುಲಕರ್ಣಿ ಹೇಳಿದರು.
ನಗರದ ಹಳೆ ಬನಶಂಕರಿ ದೇವಸ್ಥಾನದಲ್ಲಿ ಗದಗ ಜಿಲ್ಲಾ ದೇವಾಂಗ ನೌಕರರ ಸಂಘದ ಬೆಳ್ಳಿ ಮಹೋತ್ಸವದಲ್ಲಿ ಅವರು ನಗೆಹಬ್ಬ ಕಾರ್ಯಕ್ರಮ ನೀಡಿ ಮಾತನಾಡಿದರು.
ಈ ಸೃಷ್ಟಿಯಲ್ಲಿನ ಬೇರೆ ಯಾವ ಪ್ರಾಣಿಗೂ ಇರದ ನಗುವೆಂಬ ವರ ಮನುಷ್ಯನಿಗೆ ಇದೆ. ನಗುವುದರಿಂದ ಮನಸ್ಸು ಹಗುರವಾಗುತ್ತದೆ. ಮುಖದ ಮೇಲಿನ ಸ್ನಾಯುಗಳು ಸಡಿಲಗೊಂಡು ಮುಖದ ಕಾಂತಿ ಹೆಚ್ಚಾಗುತ್ತದೆ.
ಇದರಿಂದ ನಿಮ್ಮ ಸೌಂದರ್ಯಕ್ಕಾಗಿ ನೀವು ಯಾವುದೇ ಸೌಂದರ್ಯ ವರ್ಧಕವನ್ನು ಬಳಸುವ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದರು.
ಹಾಸ್ಯ ಪ್ರಜ್ಞೆ ಎಂಬುದು ನನ್ನಲ್ಲಿ ಇಲ್ಲದಿದ್ದರೆ ನಾನೆಂದಿಗೋ ಸತ್ತು ಹೋಗಿರುತ್ತಿದ್ದೆ. ಆದ್ದರಿಂದ ಹಾಸ್ಯ ಪ್ರಜ್ಞೆ ಮನುಷ್ಯನಿಗೆ ಅವಶ್ಯಕ ಎಂದು ಗಾಂಧೀಜಿ ಹೇಳಿದ್ದಾರೆ. ಬಿಡುವಿನ ವೇಳೆಯಲ್ಲಿ ನೀವು ದೂರದರ್ಶನದ ದಾಸರಾಗದೆ ಪುಸ್ತಕಗಳ ದಾಸರಾದರೆ ನಿಮ್ಮ ಮನಸ್ಸು ಪ್ರಫುಲ್ಲಿತವಾಗುತ್ತದೆ. ಸಾಹಿತ್ಯದ ಓದಿನಿಂದ ಮನಸ್ಸು ಅರಳುತ್ತದೆ. ಕುವೆಂಪು, ಬೇಂದ್ರೆ, ಬೀಚಿಯವರಂತಹ ಪುಸ್ತಕಗಳನ್ನು ಓದುವದರಿಂದ, ಡುಂಡಿರಾಜ ಅವರ ಹನಿಗವನಗಳ ಸವಿಯನ್ನು ಸವಿಯುವದರಿಂದ ನಿಮ್ಮ ಮನಸ್ಸು ಆಹ್ಲಾದಗೊಳ್ಳುತ್ತದೆ. ಆದ್ದರಿಂದ ಓದಿನ ರುಚಿಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ನಿಮ್ಮ ಮಕ್ಕಳೂ ಸಹ ಓದಿನ ಕಡೆಗೆ ಗಮನ ನೀಡುತ್ತಾರಲ್ಲದೆ, ಪುಸ್ತಕ ಪ್ರೇಮಿಗಳೂ ಆಗುತ್ತಾರೆ ಎಂದರು.
ಶಿಕ್ಷಕ ಶಿವಾನಂದ ಗಿಡ್ನಂದಿ ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿದರು. ವೇದಿಕೆಯ ಮೇಲೆ ದೇವಾಂಗ ನೌಕರರ ಸಂಘದ ಅಧ್ಯಕ್ಷ ರಾಘವೇಂದ್ರ ಕೊಪ್ಪಳ, ಅಧ್ಯಕ್ಷತೆ ವಹಿಸಿದ್ದ ರಾಜೇಂದ್ರ ಬಾರದ್ವಾಡ, ಕೋಶಾಧ್ಯಕ್ಷ ಎಸ್.ಎಂ. ಕಲ್ಲೂರ, ರಮೇಶ ಮೇಡಿ, ಆರ್.ಎಸ್. ಗಾರ್ಗಿ, ಗೀತಾ ದೇವಾಂಗಮಠ ಮುಂತಾದವರು ಉಪಸ್ಥಿತರಿದ್ದರು.