ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರಾಜ್ಯ ಸರ್ಕಾರ ಪತ್ರಕರ್ತರಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಯೋಜನೆಯನ್ನು ಜಾರಿಗೊಳಿಸಿದ್ದರೂ, ಸಲ್ಲದ ನಿಯಮಾವಳಿಯನ್ನು ವಿಧಿಸಿದ್ದರಿಂದ ಗ್ರಾಮೀಣ ಪತ್ರಕರ್ತರು ಈ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ನಿಯಮಗಳನ್ನು ಕೂಡಲೇ ಮಾರ್ಪಡಿಸಿ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಬಸ್ ಪಾಸ್ ವಿತರಿಸಬೇಕೆಂದು ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ತಹಸೀಲ್ದಾರ ವಾಸುದೇವ ಸ್ವಾಮಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲು ಕಳಸಾಪುರ ಹಾಗೂ ಹಿರಿಯ ಪತ್ರಕರ್ತ ರಮೇಶ ನಾಡಗೇರ ಮಾತನಾಡಿ, ಪತ್ರಕರ್ತರಿಗೆ ಬಸ್ ಪಾಸ್ ನೀಡುವಲ್ಲಿ ಅನೇಕ ನಿಬಂಧನೆ ವಿಧಿಸಿದ್ದರಿಂದ ಯಾವೊಬ್ಬ ಗ್ರಾಮೀಣ ಹಾಗೂ ತಾಲೂಕು ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯದಿಂದ ವಂಚಿತರಾಗುತ್ತಾರೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಿರುವುದಕ್ಕೆ ಕೇವಲ ಆಧಾರ್ ಕಾರ್ಡ್ ಮಾತ್ರ ಮಾನದಂಡವಾಗಿದೆ.
ರಾಜ್ಯದ ಗ್ರಾಮೀಣ ಭಾಗದಲ್ಲಿ ಪ್ರತಿನಿತ್ಯ ಜೀವನದ ಹಂಗು ತೊರೆದು ಸುದ್ದಿಗಾಗಿ ಅಲೆದಾಡುವ ಪತ್ರಕರ್ತರ ಕಡೆಗಣನೆ ಆಗಿದೆ. ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಪತ್ರಕರ್ತರಿಗೆ ರಾಜ್ಯ ಸರ್ಕಾರದ ಆದೇಶದಲ್ಲಿರುವ ನಿಬಂಧನೆಗಳನ್ನು ಬದಲಿಸಿ ಹೊಸ ಆದೇಶ ಹೊರಡಿಸಿ ಎಲ್ಲ ಪತ್ರಕರ್ತರಿಗೂ ಈ ಯೋಜನೆ ನೀಡುವಂತಾಗಬೇಕು. ಇಲ್ಲವಾದಲ್ಲಿ ತಾಲೂಕು ಮಟ್ಟದಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದರು.
ಈ ವೇಳೆ ಪತ್ರಕರ್ತರಾದ ನಾಗರಾಜ ಹಣಗಿ, ದಿಗಂಬರ ಪೂಜಾರ, ಅಶೋಕ ಸೊರಟೂರ, ಮಹಾಳಿಂಗರಾಯ ಪೂಜಾರ, ಸುರೇಶ ಲಮಾಣಿ, ಪರಮೇಶ ಲಮಾಣಿ, ಸೋಮಣ್ಣ ಯತ್ತಿನಹಳ್ಳಿ, ಶಿವಲಿಂಗಯ್ಯ ಹೊತಗಿಮಠ, ಮಂಜುನಾಥ ರಾಠೋಡ ಇದ್ದರು.