ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ನಾಡಿನ ಪ್ರತಿ ಮಗುವಿಗೆ ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡುವುದು ಸರ್ಕಾರದ ಆದ್ಯ ಕರ್ತವ್ಯ. ಆದರೆ ಸರ್ಕಾರವೇ ನಾಡಿನಾದ್ಯಂತ ಶಿಕ್ಷಣ ನೀಡಲು ಸಾಧ್ಯವಾಗದೆ ಇರುವುದರಿಂದ ಹಲವಾರು ದಶಕಗಳಿಂದ ಮಠ ಮಾನ್ಯಗಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಉತ್ತಮ ಶಿಕ್ಷಣ ನೀಡುತ್ತಾ ಬಂದಿವೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷ ಬಸವರಾಜ ಕೊಂಡಜ್ಜಿ ತಿಳಿಸಿದರು.
ಪಟ್ಟಣದ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದಿAದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಪ್ರತಿಭಟನೆ ನಡೆಸಿ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳಿ ಬಿಇಒ ಎಚ್.ಲೇಫಾಕ್ಷಪ್ಪನವರಿಗೆ ಮನವಿ ಸಲ್ಲಿಸಿ, ತಾಲೂಕು ಆಡಳಿತ ಕಚೇರಿಗೆ ತೆರಳಿ ತಹಸೀಲ್ದಾರ ಬಿ.ವಿ. ಗಿರೀಶ್ ಬಾಬು ಅವರಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪಂಚ ಗ್ಯಾರಂಟಿ ಭಾಗ್ಯಗಳನ್ನು ನೀಡುತ್ತಿರುವ ಕಾಂಗ್ರೆಸ್ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನವೀಕರಣ ಪ್ರಕ್ರಿಯೆ ಸರಳಗೊಳಿಸಬೇಕು. 1995ರ ನಂತರ ಪ್ರಾರಂಭವಾದ ಖಾಸಗಿ ಶಾಲಾ-ಕಾಲೇಜುಗಳನ್ನು ಅನುದಾನಕ್ಕೊಳಪಡಿಸಬೇಕು. 371 ಜೆ ಅಡಿ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಯದರ್ಶಿ ಡಿ.ಪಿ. ಮಲ್ಲಿಕಾರ್ಜುನ ಮಾತನಾಡಿ, ಸರ್ಕಾರದ ಕಠಿಣ, ಸರ್ಕಾರದ ಮಲತಾಯಿ ಧೋರಣೆಯಿಂದ ಸಾವಿರಾರು ಶಾಲಾ-ಕಾಲೇಜುಗಳು ಮುಚ್ಚಲ್ಪಟ್ಟಿವೆ. ಕಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಜೀವನಕ್ಕೆ ಕಂಟಕ ತರುವ ಕೆಲಸ ಮಾಡುತ್ತಿರುವುದು ಖಂಡನೀಯವೆಂದರು.
ಪ್ರತಿಭಟನೆಯಲ್ಲಿ ದಾದಾಪೀರ, ಸಿ. ಬಸವರಾಜ, ಅನಿಲ್, ಪಿ. ಮಂಜುನಾಥ, ಹಾಶೀಮ್, ಮಹಾರುದ್ದಾಚಾರ್, ತಾನಾಜಿ, ಡಾ. ರವಿ ಅಧಿಕಾರ, ಮಂಜುನಾಥ ಪೂಜಾರ, ವೀರೇಶ, ಕೆ.ಎಸ್. ಬಸವರಾಜಪ್ಪ, ತಿಮ್ಮಪ್ಪ, ಅನ್ನಪೂರ್ಣ, ಚೆನ್ನಬಸವನಗೌಡ, ಸಂತೋಷ, ಆನಂದಪ್ಪ, ಅರವಿಂದ, ಬಸವಲಿಂಗಪ್ಪ, ವಾಗಿಶ್ ವಕೀಲ ಸೇರಿದಂತೆ ಶಿಕ್ಷಕರು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.