ವಿಜಯಸಾಕ್ಷಿ ಸುದ್ದಿ, ಗದಗ : ಬಡವರ, ದೀನರ, ದುಃಖಿಗಳ ಕಣ್ಣೀರು ಒರೆಸುವದೇ ಲಿಂಗಪೂಜೆ-ದೇವರ ಪೂಜೆ ಎಂದರಿತಿದ್ದ ಸಿಂದಗಿ ಪಟ್ಟಾಧ್ಯಕ್ಷರು, ಭಾರತದ ಭಾವೈಕ್ಯತೆಯ ಹರಿಕಾರರಾದ ಪೂಜ್ಯ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರನ್ನು ನಾಡಿಗೆ ನೀಡಿದವರು ಪೂಜ್ಯ ಸಿಂದಗಿ ಪಟ್ಟಾಧ್ಯಕ್ಷರು ಎಂದು ಶಿವನಗೌಡ ಗೌಡರ ನುಡಿದರು.
ಅವರು ಗದುಗಿನ ಕುಮಾರೇಶ್ವರ ಧಾರ್ಮಿಕ ಪಾಠಶಾಲೆ ಅಡಿಯಲ್ಲಿ ಡಾ.ತೋಂಟದ ಶ್ರೀಗಳು ಹಾಗೂ ಸಿಂದಗಿ ಪಟ್ಟಾಧ್ಯಕ್ಷರ ಸ್ಮರಣೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಹೇಳ ಹೆಸರಿಲ್ಲದಂತೆ ಹೋಗುತ್ತಿದ್ದ ಸಾವಿರಾರು ಬಡ-ಅನಾಥ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯವನ್ನು ನೀಡಿ ಅವರೆಲ್ಲರನ್ನು ಶಾಸ್ತಿಗಳನ್ನಾಗಿ, ಸ್ವಾಮಿಗಳನ್ನಾಗಿ, ಅಧ್ಯಾಪಕರನ್ನಾಗಿ ಮಾಡಿ, ಅವರ ವ್ಯಕ್ತಿತ್ವಕ್ಕೊಂದು ಘನತೆ, ಬದುಕಿಗೊಂದು ಭದ್ರತೆಯನ್ನು ಒದಗಿಸಿದ ಪೂಜ್ಯರು ಸಿಂದಗಿ ಶ್ರೀಶಾಂತವೀರ ಪಟ್ಟಾಧ್ಯಕ್ಷರು. ಅಂತೆಯೇ ಹಳ್ಳಿ-ಹಳ್ಳಿಗಳಲ್ಲಿ ಹೇಳಲಾರದ ನೋವಿನಿಂದ ಬಳಲುತ್ತಿದ್ದ ಸಹಸ್ರಾರು ಅಭಾಗಿನಿಯರ ಕಣ್ಣೀರೊರೆಸುವ ಕೈಯಾಗಿ ಸಾಂತ್ವನ ನುಡಿಯುವ ತಾಯಿಯಾಗಿ, ಉಪಚರಿಸುವ ವೈದ್ಯರಾಗಿ ಆ ಎಲ್ಲರ ಪಾಲಿನ ಪ್ರತ್ಯಕ್ಷ ದೇವರಾದರು. ನರೇಗಲ್, ಹಾವೇರಿ, ಸಿಂದಗಿ, ಗದಗ, ಹೋತ್ನಳ್ಳಿ, ಬ್ಯಾಡಗಿ, ಸಂಗೂರ ಇಲ್ಲೆಲ್ಲ ಪಾಠಶಾಲೆಗಳನ್ನು ಪ್ರಾರಂಭಿಸಿದರು.
ಹಾನಗಲ್, ಹಾವೇರಿ, ಗದಗ, ಧಾರವಾಡ, ಶಿವಮೊಗ್ಗಗಳಲ್ಲಿ ಪೂಜ್ಯ ಪಟ್ಟಾಧ್ಯಕ್ಷರ ಪ್ರೀತಿ, ಕರುಣೆ, ಸೇವೆ, ಮಮತೆ, ತ್ಯಾಗ, ಆತ್ಮೀಯತೆಗಳೇ ಮಳೆಯಾಗಿ ಸುರಿಯುತ್ತಿವೆ. 19ನೇ ಶತಮಾನದ ಆದಿ ಭಾಗದಲ್ಲಿ ಪೂಜ್ಯ ಪಟ್ಟಾಧ್ಯಕ್ಷರು ಇರದೇ ಹೋಗಿದ್ದರೆ ಒಂದು ಪ್ರದೇಶದ ಜನ ಆಚಾರ-ವಿಚಾರ-ಧರ್ಮಾಚರಣೆಗಳಿಂದ ವಂಚಿತರಾಗುತ್ತಿದ್ದರೆಂದು ಅಭಿಪ್ರಾಯಪಟ್ಟರು.
ಹೇಮರಾಜ ಶಾಸ್ತಿಗಳು ಹೆಡಿಗ್ಗೊಂಡ ಇವರಿಂದ ಏಳು ದಿನಗಳವರೆಗೆ ಪ್ರವಚನ ಜರುಗಿತು. ಮಹಾದೇವಪ್ಪ ಗವಾಯಿಗಳು ಬರದೂರ ಇವರಿಂದ ಸಂಗೀತ ಸೇವೆ ಜರುಗಿತು. ಚನ್ನಯ್ಯನವರು ಹಿರೇಮಠ ಇವರು ಪೂಜ್ಯ ಪಟ್ಟಾಧ್ಯಕ್ಷರ ಅಂತಿಮ ದಿನಗಳಲ್ಲಿ ಸೇವೆ ಸಲ್ಲಿಸಿದ ಅನುಭವಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಪಿಎಸ್‌ಐ ಆಗಿ ಬಡ್ತಿ ಹೊಂದಿದ ನೀಲಮ್ಮ ಘಂಟಿ, ಬೋಡನಾಯಕದಿನ್ನಿ ಇವರನ್ನು ಸಂಮಾನಿಸಲಾಯಿತು. ಅತಿಥಿಗಳನ್ನು ಶಿವಪ್ರಸಾದ ದೇವರು ಪರಿಚಯಿಸಿ-ಸ್ವಾಗತಿಸಿದರು. ಶಿವಾನಂದ ಪಟ್ಟಾಧ್ಯಕ್ಷರು ಕಾರ್ಯಕ್ರಮದ ಸ್ವರೂಪವನ್ನು, ನಡೆದು ಬಂದ ದಾರಿಯನ್ನು ಸಭೆಗೆ ವಿವರಿಸಿದರು. ಚನ್ನಬಸಯ್ಯ ಶಾಸ್ತಿಗಳು ನಿರೂಪಿಸಿದರು.
ಇದೇ ಸಂಧರ್ಭದಲ್ಲಿ ಹಿರಿಯರಾದ ಚನ್ನಯ್ಯನವರು ಹಿರೇಮಠ, ಶರಣುಗೌಡ ಮರಿಗೌಡ್ರ, ಗುರುನಾಥ ಸುತಾರ, ಮಹೇಶ ಮುದ್ದೇಬಿಹಾಳ ಇವರನ್ನು ಸನ್ಮಾನಿಸಲಾಯಿತು. ಸಮ್ಮುಖವನ್ನು ಶಂಭುಲಿಂಗ ಶಿವಾಚಾರ್ಯರು ಹೋತನಹಳ್ಳಿ, ಶಿವಾನಂದ ಶಿವಾಚಾರ್ಯರು ಸಿಂದಗಿ, ಚನ್ನಬಸವದೇವರು ಸಂಶಿ, ಶಿವಪ್ರಸಾದ ದೇವರು, ಗದಗ ಇವರು ನೇತೃತ್ವವಹಿಸಿದ್ದರು.


