ಸಂಗೀತ ಲೋಕದ ಸೂಪರ್‌ಸ್ಟಾರ್ ಗಾಯಕ ಅರಿಜಿತ್ ಸಿಂಗ್ ನಿವೃತ್ತಿ ಘೋಷಣೆ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ಅನೇಕ ಸೂಪರ್ ಹಿಟ್ ಹಾಡುಗಳ ಮೂಲಕ ಸಂಗೀತ ಲೋಕದಲ್ಲಿ ಅಚ್ಚಳಿಯದ ಗುರುತು ಮೂಡಿಸಿರುವ ಅರಿಜಿತ್, ಈಗ ಹಿನ್ನೆಲೆ ಗಾಯನದಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದ್ದಾರೆ.
ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. “ಈ ಪ್ರಯಾಣ ಅದ್ಭುತವಾಗಿತ್ತು. ಕೇಳುಗರಾಗಿ ನನಗೆ ನೀಡಿದ ಪ್ರೀತಿಗೆ ನಾನು ಸದಾ ಋಣಿಯಾಗಿದ್ದೇನೆ. ಇನ್ನು ಮುಂದೆ ಹೊಸ ಹಿನ್ನೆಲೆ ಗಾಯನ ಕೆಲಸಗಳನ್ನು ಸ್ವೀಕರಿಸುವುದಿಲ್ಲ”
ಎಂದು ಹೇಳಿದ್ದಾರೆ.
ಆದರೆ ಸಂಗೀತವನ್ನು ಸಂಪೂರ್ಣವಾಗಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಇನ್ನಷ್ಟು ಕಲಿಯಬೇಕು, ಚಿಕ್ಕ ಕಲಾವಿದನಾಗಿ ಹೊಸ ಪ್ರಯತ್ನಗಳನ್ನು ಮುಂದುವರಿಸಬೇಕು ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಒಪ್ಪಿಕೊಂಡಿರುವ ಹಾಡುಗಳನ್ನು ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.
ಕನ್ನಡದ ‘ಮೌನ ತಾಳಿತೆ..’ ಸೇರಿದಂತೆ ಹಲವು ಭಾಷೆಗಳ ಹಾಡುಗಳ ಮೂಲಕ ಬಹುಭಾಷಾ ಅಭಿಮಾನಿಗಳನ್ನು ಸಂಪಾದಿಸಿರುವ ಅರಿಜಿತ್, ಈ ನಿರ್ಧಾರಕ್ಕೆ ಕಾರಣವೇನು ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ದು, “ಈ ನಿರ್ಧಾರ ಹಿಂತೆಗೆದುಕೊಳ್ಳಲಿ” ಎಂಬ ಆಶಯ ವ್ಯಕ್ತಪಡಿಸುತ್ತಿದ್ದಾರೆ.



