ತಮಿಳು ಚಿತ್ರರಂಗದ ಖ್ಯಾತ ನಟ ರವಿ ಮೋಹನ್ ಇತ್ತೀಚೆಗೆ ತಮ್ಮ ವೈಯಕ್ತಿಯ ವಿಚಾರದಲ್ಲಿ ಸಖತ್ ಸುದ್ದಿಯಾಗ್ತಿದ್ದಾರೆ. ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ರವಿ ಮೋಹನ್ ಹಾಗೂ ಆರತಿ ದೂರ ದೂರವಾಗಿದ್ದಾರೆ. ರವಿ ಮೋಹನ್ ಹಾಗೂ ಆರತಿ ನಡುವೆ ಬಿರುಕು ಮೂಡಲು ಗಾಯಕಿ ಕೆನಿಷಾ ಕಾರಣ ಎಂದು ಹೇಳಲಾಗುತ್ತಿದೆ. ಆರತಿ ಹಾಗೂ ರವಿ ವಿಚ್ಛೇದನ ಪ್ರಕರಣ ಇನ್ನೂ ಕೋರ್ಟ್ನಲ್ಲಿ ಇರುವಾಗಲೇ ಜಯಂ ರವಿ ಅವರ ಗರ್ಲ್ಫ್ರೆಂಡ್ ಎನ್ನಲಾದ ಕೆನಿಶಾ ಫ್ರಾನ್ಸಿಸ್ ಗರ್ಭಿಣಿ ಎಂಬ ಸುದ್ದಿ ಹರಿದಾಡಿದ್ದು ಈ ಬಗ್ಗೆ ಸ್ವತಃ ಕೆನಿಶಾ ಸ್ಪಷ್ಟನೆ ನೀಡಿದ್ದಾರೆ.
ಕೆನೀಶಾ ಗರ್ಭಿಣಿ ಎಂಬ ಸುದ್ದಿಗೆ ಪ್ರತಿಕ್ರಿಯಿಸಿರುವ ಗಾಯಕಿ, ‘ನೋಡಿ.. ನನಗೆ ಸುಂದರವಾದ ಸಿಕ್ಸ್ ಪ್ಯಾಕ್ ಇದೆ. ನಾನು ಗರ್ಭಿಣಿಯಲ್ಲ. ಯಾರು ಏನೇ ಹೇಳಿದರೂ, ಅವರು ತಮ್ಮ ಕರ್ಮವನ್ನು ಅನುಭವಿಸುತ್ತಾರೆ. ಸತ್ಯ ಮತ್ತು ಸುಳ್ಳುಗಳು ಶೀಘ್ರದಲ್ಲೇ ತಿಳಿಯುತ್ತವೆ. ಅಲ್ಲಿಯವರೆಗೆ, ಎಲ್ಲರೂ ಮನೆಯಲ್ಲಿ ಬಿರಿಯಾನಿ ಮಾಡಿಕೊಂಡು ಅದನ್ನು ಶಾಂತಿಯುತವಾಗಿ ತಿನ್ನಿರಿ. ಮತ್ತು ನಾನು ಸಹ ಶಾಂತಿಯುತವಾಗಿರಲು ಬಿಡಿ,’ ಎಂದು ಕೆನಿಶಾ ಹೇಳಿದ್ದಾರೆ.
ಇತ್ತೀಚೆಗೆ ಕೆನಿಶಾ ಹಾಗೂ ರವಿ ಮೋಹನ್ ಅವರು ಇಶಾರಿ ಗಣೇಶ್ ಅವರ ಮಗಳ ಮದುವೆಯಲ್ಲಿ ಭಾಗವಹಿಸಿದ್ದರು. ಇಬ್ಬರು ಒಟ್ಟೊಟ್ಟಿಗೆ ಇರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಸದ್ಯ ರವಿ ಮೋಹನ್ ಹಾಗೂ ಆರತಿ ವಿಚ್ಚೇದನ ಪ್ರಕ್ರಿಯೆ ಕೋರ್ಟ್ ನಲ್ಲಿದ್ದು ಆರತಿ ದುಬಾರಿ ಮೊತ್ತದ ಜೀವನಾಂಶ ಕೇಳಿದ್ದಾರೆ ಎನ್ನಲಾಗುತ್ತಿದೆ.