ಖ್ಯಾತ ಗಾಯಕ ರಘು ದೀಕ್ಷಿತ್ ಅವರು ಗಾಯಕಿ ಹಾಗೂ ಕೊಳಲು ವಾರಿಜಶ್ರೀ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆದ ಮದುವೆಯಲ್ಲಿ ಆಪ್ತರು, ಕುಟುಂಬಸ್ಥರು ಹಾಗೂ ಸ್ನೇಹಿತರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಇದೀಗ ಮದುವೆಯ ಬಳಿಕ ಮೊದಲ ಫೋಟೋವನ್ನು ರಘು ದೀಕ್ಷಿತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ʻಪ್ರೀತಿ ಮತ್ತು ಬೆಳಕುʼ ಎಂದು ತಮ್ಮ ಹೊಸ ಜೀವನದ ಬಗ್ಗೆ ಬರೆದುಕೊಂಡಿದ್ದಾರೆ.
ತಮ್ಮ ಮದುವೆಯ ಸುಂದರ ಫೋಟೋ ಹಂಚಿಕೊಂಡಿರುವ ರಘು ದೀಕ್ಷಿತ್, ವಾರಿಜಶ್ರೀ ವೇಣುಗೋಪಾಲ್ ಅವರೊಂದಿಗೆ ಮದುವೆಯಾಗಿ ಹೊಸ ಜೀವನ ಆರಂಭಿಸಿದ್ದಾಗಿ ತಿಳಿಸಿದ್ದಾರೆ. “ಸಂತೋಷ ಮತ್ತು ಒಗ್ಗಟ್ಟಿಗೆ! ನಮ್ಮ ಹಿರಿಯರು, ಕುಟುಂಬಗಳು ಮತ್ತು ಪ್ರೀತಿಪಾತ್ರರ ಆಶೀರ್ವಾದದೊಂದಿಗೆ ಈ ಹೊಸ ಪಯಣಕ್ಕೆ ಕಾಲಿಡಲು ಕೃತಜ್ಞರಾಗಿರುತ್ತೇವೆ. ಪ್ರೀತಿ ಮತ್ತು ಬೆಳಕು” ಎಂದು ಕ್ಯಾಪ್ಷನ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಹಿಂದೆ ರಘು ದೀಕ್ಷಿತ್ ಅವರು ಮೊದಲು ಜನಪ್ರಿಯ ಡ್ಯಾನ್ಸರ್ ಮತ್ತು ಕೊರಿಯೋಗ್ರಾಫರ್ ಮಯೂರಿ ಉಪಾಧ್ಯ ಅವರೊಂದಿಗೆ ವಿವಾಹವಾಗಿದ್ದರು. ಆದರೆ, ರಘು ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು. ಆ ಬೆನ್ನಲ್ಲೇ ಮಾಜಿ ಪತ್ನಿ ಮಯೂರಿ ಅವರು ರಘು ದೀಕ್ಷಿತ್ ಅವರಿಗೆ ಡಿವೋರ್ಸ್ ನೀಡಿದ್ದರು. 2019ರಲ್ಲಿ ರಘು ದೀಕ್ಷಿತ್ ಹಾಗೂ ಮಯೂರಿ ಉಪಾಧ್ಯ ಬೇರ್ಪಟ್ಟರು. ಇದೀಗ ರಘು ದೀಕ್ಷಿತ್ ಮತ್ತೆ ಮದುವೆಯಾಗಿ ಹೊಸ ಜೀವನ ಆರಂಭಸಿದ್ದಾರೆ.



