ವಿಜಯಸಾಕ್ಷಿ ಸುದ್ದಿ, ಗದಗ: ಅಂಧ, ಅನಾಥ, ದೀನ-ದಲಿತ ಸರ್ವ ಸಮಾಜದ ಮಕ್ಕಳನ್ನು ತಮ್ಮ ಆಶ್ರಮದಲ್ಲಿ ಸಾಕಿ ಸಂಗೀತ ವಿದ್ಯೆಯನ್ನು ನೀಡಿದ ಡಾ. ಪಂ. ಪುಟ್ಟರಾಜ ಗವಾಯಿಗಳು ಅಂಧ-ಅನಾಥ ಮಕ್ಕಳ ಬಾಳಿನ ನಂದಾದೀಪವಾಗಿದ್ದಾರೆ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ ಅಭಿಪ್ರಾಯಪಟ್ಟರು.
ಸೋಮವಾರ ಸಂಜೆ ಗದಗ ನಗರದ ವೀರನಾರಾಯಣ ಬಡಾವಣೆ ಹಾಗೂ ಕೆ.ಎಚ್. ಪಾಟೀಲ ಬಡಾವಣೆಯ ಶ್ರೀ ಪಂ. ಪುಟ್ಟರಾಜ ಸಮಾಜ ಸೇವಾ ಟ್ರಸ್ಟ್ನ 3ನೇ ವರ್ಷದ ವಾರ್ಷಿಕೋತ್ಸವ, ಶ್ರೀ ಪಂ.ಪುಟ್ಟರಾಜ ಕವಿ ಗವಾಯಿಗಳವರ 111ನೇ ಜಯಂತ್ಯುತ್ಸವ ಹಾಗೂ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗವಾಯಿಗಳ ಸ್ಮರಣೆಯ ಸಲುವಾಗಿ ವಿವಿಧ ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಂಡಿರುವದು ಸಂತಸದ ವಿಷಯ. ಗವಾಯಿಗಳು ಜಗತ್ತಿನ ಸಂಗೀತ ಲೋಕದ ಮಿನುಗುವ ತಾರೆಯಾಗಿದ್ದಾರೆ. ಅವರ ತತ್ವ-ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾದ ಗದಗ ಶಹರ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಪಂ.ಪುಟ್ಟರಾಜ ಗವಾಯಿಗಳು ನಡೆದಾಡುವ ದೇವರಾಗಿ ಸಂಗೀತ ಸಾಮ್ರಾಜ್ಯ ನಿರ್ಮಿಸಿದ್ದಾರೆ. ಅವರು ಭಕ್ತರಿಗೆ ಧರ್ಮದ ದಾರಿಯಲ್ಲಿ ನಡೆದರೆ ನಿಮಗೆ ಯಾವ ಕಷ್ಟಗಳು ಬರುವುದಿಲ್ಲ, ನಿವೇಲ್ಲರೂ ಧರ್ಮ ಮಾರ್ಗದಲ್ಲಿ ನಡೆದಾಗ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂಬ ಸಂದೇಶ ಸಾರಿದ್ದಾರೆ. ಅವರ ಕಾಲಾವಧಿಯಲ್ಲಿ ಜೀವಿಸಿದ ನಾವೆಲ್ಲರೂ ಧನ್ಯರು. ನಿಮ್ಮ ಸಂಘಟನಾತ್ಮಕ ಶಕ್ತಿಯಿಂದ ಪಂ.ಪುಟ್ಟರಾಜ ಗವಾಯಿಗಳ ದೇವಸ್ಥಾನ ನಿರ್ಮಿಸಿ ಇಂತಹ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪಂಡಿತ ಪುಟ್ಟರಾಜ ಸಮಾಜ ಸೇವಾ ಟ್ರಸ್ಟ್ನ ಅಧ್ಯಕ್ಷ ಶಿದ್ರಾಮಯ್ಯ ಗವಿಸಿದ್ಧಯ್ಯ ಕಟಗಿಹಳ್ಳಿಮಠ ವಹಿಸಿದ್ದರು. ಅತಿಥಿಗಳಾಗಿ ವಿರೂಪಾಕ್ಷಪ್ಪ ಗವಾಯಿಗಳು ಗುಡೂರ, ಎನ್.ಎಚ್. ನಾಗನೂರ, ಶಾಂತಣ್ಣ ಮುಳವಾಡ, ಸುನೀಲ ಮಲ್ಲಪ್ಪ ಚಿನ್ನಪೂರ, ಶಿವಪ್ಪ ಈರಪ್ಪ ಲಗಳಿ, ಶಿವಯ್ಯ ಬೆಳ್ಳೇರಿಮಠ, ಶ್ರೀ ಪಂಡಿತ ಪುಟ್ಟರಾಜ ಸಮಾಜ ಸೇವಾ ಟ್ರಸ್ಟ್ನ ಉಪಾಧ್ಯಕ್ಷ ಬಸನಗೌಡ ಬಿ.ಪಾಟೀಲ, ಕಾರ್ಯದರ್ಶಿ ಗಂಗನಗೌಡ ಬಿ.ಬೆಣಕಲ್, ಸಹಕಾರ್ಯದರ್ಶಿ ಈಶಪ್ಪ ವ್ಹಿ.ಅಂಗಡಿ, ಖಜಾಂಚಿ ಮಾಂತೇಶ ಲಗಳಿ, ಸದಸ್ಯರಾದ ಬಸವರಾಜ ದಾವಣಗೆರೆ, ಶರಣಪ್ಪ ಮೇಟಿ, ಭೀಮಪ್ಪ ಯ.ಮಕಾಶಿ, ಮಂಜುನಾಥ ಕ್ಯಾಡದ ಮುಂತಾದವರಿದ್ದರು.
ಎಸ್.ಬಿ. ದೊಡ್ಡಣ್ಣವರ ಕಾರ್ಯಕ್ರಮದ ನಿರೂಪಿಸಿದರು. ಗಂಗನಗೌಡ ಬೆಣಕಲ್ ವಂದಿಸಿದರು.
ಬಾಗಲಕೋಟ ಜಿಲ್ಲೆಯ ನಾವಲಗಿ ಗ್ರಾಮದ ಶಹನಾಯಿ ವಾದಕ ಮಾರುತಿ ಭಜಂತ್ರಿ ಹಾಗೂ ಗದಗ ನಗರದ ಮೃತ್ಯುಂಜಯ ಮಠದ ತಬಲಾ ವಾದನದ ಜುಗಲ್ ಬಂದಿ ಕಾರ್ಯಕ್ರಮ ಕಲಾಸಕ್ತರನ್ನು ಸೆಳೆಯಿತು. ವಿರೂಪಾಕ್ಷ ಗವಾಯಿಗಳು ಗುಡೂರ ಇವರ ಶಾಸ್ತ್ರೀಯ ಸಂಗೀತ, ಭಕ್ತಿ ಸಂಗೀತ, ಭಾವಗೀತೆಗಳು ಜನಮನ ರಂಜಿಸಿದವು. ಶ್ರೀ ವೀರೇಶ್ವರ ಪುಣ್ಯಾಶ್ರಮದ ಶಿಷ್ಯ-ಪ್ರಶಿಷ್ಯರಿಂದ ಸಂಗೀತ ಕಾರ್ಯಕ್ರಮ ಜರುಗಿತು.