ಗದಗ: ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಲ್ತ್ ಕ್ಯಾಂಪ್ ನಲ್ಲಿ ಇರುವ ಒಂಟಿ ಮಹಿಳೆ ವಾಸವಿದ್ದ ಮನೆಗೆ ನುಗ್ಗಿ ವೃದ್ದ ಮಹಿಳೆ ಕೊಲೆಗೈದು ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಐದು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ್ ಆದೇಶ ಹೊರಡಿಸಿದ್ದಾರೆ.

ಶಂಕ್ರಪ್ಪ ಶಿವಪ್ಪ ಹರಣಶಿಕಾರಿ, ಚಂದ್ರಪ್ಪ ಸೋಮಶೇಖರ ಹರಣಶಿಕಾರಿ, ಮಾರುತಿ ಚನ್ನಪ್ಪ ರೋಣ, ಮನ್ನಪ್ಪ ಪುತನಪ್ಪ ರೋಣ, ಉಮೇಶ್ ಅರ್ಜುನ್ ಹರಣಶಿಕಾರಿ ಎಂಬುವವರೆ ಜೀವಾವಧಿ ಶಿಕ್ಷೆಗೆ ಗುರಿಯಾದವರಾಗಿದ್ದು, ಪ್ರಕರಣದ ಮತ್ತೊಬ್ಬ ಆರೋಪಿ ಪ್ರಮೋದ ರಾಯಪ್ಪ ಕೊರವರನಿಗೆ 3 ವರ್ಷ ಶಿಕ್ಷೆ ಹಾಗೂ3 ಸಾವಿರ ದಂಡ ವಿಧಿಸಿದ್ದಾರೆ.
ಏನಿದು ಪ್ರಕರಣ
ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಲ್ತ್ ಕ್ಯಾಂಪ್ ನಲ್ಲಿ ಸರೋಜಾ ತುಳಸಿನಾಥಸಾ ಕಬಾಡಿ ಎಂಬ ವೃದ್ಧ ಮಹಿಳೆಯೊಬ್ಬರು ಮನೆಯಲ್ಲಿ ಒಬ್ಬರೇ ವಾಸವಿದ್ದರು. ಆರೋಪಿಗಳು ಸರೋಜಾ ಅವರ ಮನೆಗೆ ನುಗ್ಗಿ, ಆಕೆಯ ತಲೆಗೆ ಹೊಡೆದು ಕೊಲೆ ಮಾಡಿದ್ದರು. ಬಳಿಕ ಟ್ರಜರಿಯಲ್ಲಿದ್ದ 260 ಗ್ರಾಂ ಚಿನ್ನಾಭರಣವನ್ನು ದರೋಡೆ ಮಾಡಿ ಎಸ್ಕೇಪ್ ಆಗಿದ್ದರು.
ಈ ಸಂಬಂಧ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ ಆಗಿನ ಬೆಟಗೇರಿ ವೃತ್ತ ಸಿಪಿಐ ವೆಂಕಟೇಶ ಕೆ.ಯಡಹಳ್ಳಿ, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ತಲಾ 10 ಸಾವಿರ ದಂಡ ಹಾಗೂ ಮತ್ತೊಬ್ಬ ಆರೋಪಿಗೆ ಮೂರು ವರ್ಷ ಶಿಕ್ಷೆ, 3 ಸಾವಿರ ದಂಡ ವಿಧಿಸಿ ಶುಕ್ರವಾರ ತೀರ್ಪು ಪ್ರಕಟಿಸಿದರು. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಸವಿತಾ ಎಂ.ಶಿಗ್ಲಿ ವಾದ ಮಂಡಿಸಿದ್ದಾರೆ


