ವಿಜಯಪುರ: ಕರ್ನಾಟಕದಲ್ಲೂ ಎಸ್‌ಐಆರ್ ಜಾರಿ ಆಗಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಬಾಂಗ್ಲಾ ವಲಸಿಗರು, ರೊಹಿಂಗ್ಯಾಗಳು ಬಹಳ ಜನರಿದ್ದಾರೆ. ಅವರನ್ನೆಲ್ಲ ದೇಶದಿಂದ ಹೊರಹಾಕಲು ಕೇಂದ್ರ ಸರ್ಕಾರ ಕೆಲಸ ಮಾಡ್ತಿದೆ. ಅದರಂತೆ ಕರ್ನಾಟಕದಲ್ಲಿಯೂ ಎಸ್‌ಐಆರ್ ಜಾರಿ ಆಗಬೇಕು. ಎಸ್‌ಐಆರ್ ಜಾರಿಗೆ ಬಂದ ಬಳಿಕ ವಲಸಿಗರು, ರೊಹಿಂಗ್ಯಾಗಳು ಹಾಗೂ ಅವರಿಗೆ ಸಹಕಾರ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಮಾತ್ರವೇ ಇಪ್ಪತ್ತು ಸಾವಿರಕ್ಕೂ ಹೆಚ್ಚು ನಕಲಿ ಮತದಾರರು ಇದ್ದಾರೆ ಎಂದು ಆರೋಪಿಸಿದ ಯತ್ನಾಳ್, ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು. ಒಬ್ಬ ವ್ಯಕ್ತಿ ಮೂರು ಮತದಾರರ ಗುರುತಿನ ಚೀಟಿ ಪಡೆದಿರುವುದನ್ನು ಉದಾಹರಣೆಯಾಗಿ ಉಲ್ಲೇಖಿಸಿ, ಒಂದೇ ಫೋಟೋ ಬಳಸಿ ಹೆಸರುಗಳ ಅಕ್ಷರಗಳಲ್ಲಿ ವ್ಯತ್ಯಾಸ ಮಾಡಿ ವೋಟರ್ ಐಡಿ ಮಾಡಿಸಿಕೊಂಡಿದ್ದಾರೆ ಎಂದು ದೂರಿದರು.



