ನವದಹೆಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದ ದಾಳಿ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಕರ್ನಾಟಕದ ಅನೇಕ ಪ್ರವಾಸಿಗರ ಸ್ಥಿತಿ ಅತಂತ್ರವಾಗಿದೆ. ರಾಜ್ಯದ ಇಬ್ಬರು ದಾಳಿಯಲ್ಲಿ ಮೃತಪಟ್ಟಿದ್ದಾರೆ. ಈ ಮಧ್ಯೆ ಎನ್ಐಎ ಮತ್ತು ವಿಧಿವಿಜ್ಞಾನ ತಂತ್ರಜ್ಞರಿಂದ ಶಂಕಿತ ಮೂವರು ಉಗ್ರರ ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ. ಒಟ್ಟು ಐವರು ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದರು.
ಪ್ರವಾಸಿಗರು ಮತ್ತು ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಆಧಾರದ ಮೇಲೆ ರೇಖಾಚಿತ್ರ ಸಿದ್ಧಪಡಿಸಲಾಗಿದೆ. ಈ ದಾಳಿಯಲ್ಲಿ ಒಟ್ಟು 26 ಪುರುಷ ಪ್ರವಾಸಿಗರು ಮೃತರಾಗಿದ್ದಾರೆ. ಉಗ್ರರ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಸೌದಿ ಅರೇಬಿಯಾ ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ಹಿಂದಿರುಗಿದ್ದಾರೆ.
ಭಾರತಕ್ಕೆ ಬರುತ್ತಿದ್ದಂತೆ ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಪ್ರಧಾನಿ ಮೋದಿಯವರು ಸಚಿವರು ಮತ್ತು ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಘಟನೆಯ ಕುರಿತ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಇಂದು ಸಂಜೆ ಪ್ರಧಾನಿಗಳ ನಿವಾಸದಲ್ಲಿ ಸಂಪುಟ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ.