ವಿಜಯಸಾಕ್ಷಿ ಸುದ್ದಿ, ಗದಗ : ಐ.ಸಿ.ಎ.ಆರ್-ನಾರ್ಮ್ ಹೈದರಾಬಾದ ಹಾಗೂ ಐ.ಸಿ.ಎ.ಆರ್-ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ ಇವರ ಸಹಯೋಗದಲ್ಲಿ ಪರಿಶಿಷ್ಠ ಜಾತಿ ಉಪ ಯೋಜನೆ ಅಡಿ ಪರಿಶಿಷ್ಠ ಜಾತಿ ಮಹಿಳೆಯರಿಗೆ ಜೀವನೋಪಾಯದ ವರ್ಧನೆಗಾಗಿ ಹೊಲಿಗೆ ಉದ್ದಿಮೆಯಲ್ಲಿ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ನಾರ್ಮ್ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಬಾಲಕೃಷ್ಣನ್ ನೆರವೇರಿಸಿ, ಜಿಲ್ಲೆಯಲ್ಲಿ ಪರಿಶಿಷ್ಠ ಜಾತಿ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಪ್ರತಿಯೊಂದು ಕುಟುಂಬಕ್ಕೂ ಈ ಯೋಜನೆಯು ಲಭ್ಯವಾಗಲಿ. ಈ ತರಬೇತಿಯ ಮುಖಾಂತರ ಮಹಿಳೆಯರು ಸ್ವ ಉದ್ಯೋಗಿಗಳಾಗಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿ ಎಸ್.ಬಿ.ಐ-ಎ.ಎಸ್.ಎಫ್ ಆರ್‌ಸೆಟಿಯ ನಿರ್ದೇಶಕ ಡಾ.ಶಿವಕುಮಾರ ಹುಲಕೋಟಿ ಪಾಲ್ಗೊಂಡು ಮಾತನಾಡಿ, ತಮ್ಮ ಸಂಸ್ಥೆಯಿಂದ ಹಲವಾರು ಸ್ವ ಉದ್ಯೋಗದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ನಿರುದ್ಯೋಗ ಯುವಕ-ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಎ.ಎಸ್.ಎಫ್ ಮತ್ತು ಕೆವಿಕೆ ಹುಲಕೋಟಿಯ ಚೇರಮನ್ ಡಿ.ಆರ್. ಪಾಟೀಲ ಮಾತನಾಡಿ, ಪ್ರತಿ ಕುಟುಂಬದಲ್ಲಿ ಸ್ವ ಉದ್ಯೋಗಗಳು ಹಾಗೂ ಉಪಕಸುಬುಗಳೂ ಅವಶ್ಯಕವಾಗಿವೆ. ತಾವು ಮಾಡುತ್ತಿರುವ ಉದ್ಯೋಗದ ಜೊತೆಗೆ ಕುಟುಂಬಕ್ಕೆ ಸರಿ ಹೊಂದುವಂತಹ ಉಪ ಉದ್ಯೋಗವನ್ನು ಮಾಡಿ ಕುಟುಂಬದ ಆದಾಯವನ್ನು ಹೆಚ್ಚಿಸಿಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಕಾರ ರೇಡಿಯೋದ ಜೆ.ಕೆ. ಜಮಾದಾರ, ನಿವೃತ್ತ ಡಿಡಿಪಿಐ ನಾಗರಳ್ಳಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ನಾಗವೇಣಿ ವಡವಡಗಿ ಭಾಗವಹಿಸಿದ್ದರು. ಪ್ರಾಸ್ತಾವಿಕವಾಗಿ ಹಿರಿಯ ವಿಜ್ಞಾನಿ ಡಾ. ಸುಧಾ ಮಂಕಣಿ ಮಾತನಾಡಿದರು. ಡಾ. ವಿನಾಯಕ ನಿರಂಜನ ನಿರೂಪಿಸಿದರು. ಎನ್.ಎಚ್. ಭಂಡಿ ವಂದಿಸಿದರು. ಕಾರ್ಯಕ್ರಮದಲ್ಲಿ ೨೦ ಜನ ಪರಿಶಿಷ್ಠ ಜಾತಿ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ನೀಡಲಾಯಿತು.