ಬೆಂಗಳೂರು: ಕನ್ನಡ ಸಾರಸ್ವತ ಲೋಕದ ಧ್ರವ ನಕ್ಷತ್ರ, ಹಿರಿಯ ಸಾಹಿತಿ ಎಸ್ಎಲ್ ಭೈರಪ್ಪ ಇಂದು ನಿಧನರಾಗಿದ್ದಾರೆ. 94 ವರ್ಷದ ವಯಸ್ಸಿನವರಾಗಿದ್ದ ಹಿರಿಯ ಸಾಹಿತಿ ಎಸ್ಎಲ್ ಭೈರಪ್ಪ ಅವರು ಕಳೆದ ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ತಮ್ಮ ಸಾಹಿತ್ಯ ಸೇವೆಗಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಪ್ರಮುಖ ಕಾದಂಬರಿಗಳಾದ ವಂಶವೃಕ್ಷ, ದಾಟು, ತಂತು ಮುಂತಾದವು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿವೆ. ಭೈರಪ್ಪನವರು ಕಾದಂಬರಿಗಳ ಜೊತೆಗೆ ಸೌಂದರ್ಯ ಮೀಮಾಂಸೆಯ ಕುರಿತು ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಅವರು 1999 ರಲ್ಲಿ ಕನಕಪುರದಲ್ಲಿ ನಡೆದ 67ನೇ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಭೈರಪ್ಪನವರ ಕಾದಂಬರಿಗಳು ಜನಪ್ರಿಯವಾಗಿವೆ. ಅವು ಹಲವು ಬಾರಿ ಮರುಮುದ್ರಣಗೊಂಡಿವೆ. ಅವರ ಕೃತಿಗಳು ಮರಾಠಿ, ಇಂಗ್ಲಿಷ್, ಹಿಂದಿ ಮೊದಲಾದ ಭಾಷೆಗಳಿಗೆ ಅನುವಾದವಾಗಿವೆ. “ವಂಶವೃಕ್ಷ“, “ತಬ್ಬಲಿಯು ನೀನಾದೆ ಮಗನೆ” ಕಾದಂಬರಿಗಳು ಚಲನಚಿತ್ರಗಳಾಗಿವೆ.



