ನವದೆಹಲಿ:- ಇಲ್ಲಿನ ಸಿವಿಲ್ ಲೈನ್ಸ್ ಬಳಿಯಿರುವ ತಮ್ಮ ನಿವಾಸದಲ್ಲಿ ಜನತಾ ಸಂದರ್ಶನ ವೇಳೆ ಸಿಎಂ ರೇಖಾ ಗುಪ್ತಾಗೆ ವ್ಯಕ್ತಿಯೋರ್ವ ಕಪಾಳ ಮೋಕ್ಷ ಮಾಡಿರುವ ಘಟನೆ ಜರುಗಿದೆ.
ಘಟನೆ ಬೆನ್ನಲ್ಲೇ 30 ವರ್ಷದ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜನ ಸಂದರ್ಶನಕ್ಕೆ ಸಿಎಂ ಆಗಮಿಸಿದ್ದ ವೇಳೆ, ವ್ಯಕ್ತಿ ಕೆಲವು ಕಾಗದ ಪತ್ರಗಳೊಂದಿಗೆ ಬಂದಿದ್ದ. ಮನವಿ ಕೊಡುವ ನೆಪದಲ್ಲಿ ಬಂದು ಏಕಾಏಕಿ ಕೂಗಾಡಿ, ಕಪಾಳಮೋಕ್ಷ ಮಾಡಿದ್ದಾನೆ. ಕೂಡಲೇ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ ಎನ್ನಲಾಗಿದೆ. ಇನ್ನೂ ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲಿನ ದಾಳಿಯನ್ನು ಮಾಜಿ ಸಿಎಂ ಅತಿಶಿ ಖಂಡಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಸಿಎಂ ಮೇಲಿನ ದಾಳಿ ಅತ್ಯಂತ ಖಂಡನೀಯ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ಮತ್ತು ಪ್ರತಿಭಟನೆಗೆ ಅವಕಾಶವಿದೆ. ಆದರೆ ಹಿಂಸಾಚಾರಕ್ಕೆ ಸ್ಥಳವಿಲ್ಲ. ದೆಹಲಿ ಪೊಲೀಸರು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ಆಶಿಸುತ್ತೇನೆ. ಮುಖ್ಯಮಂತ್ರಿ ಸಂಪೂರ್ಣವಾಗಿ ಸುರಕ್ಷಿತವಾಗಿದ್ದಾರೆ ಎಂದು ಆಶಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.