ವಿಜಯಸಾಕ್ಷಿ ಸುದ್ದಿ, ಗದಗ: 2024ರಲ್ಲಿ ಪಿಯುಸಿ ಫಲಿತಾಂಶದಲ್ಲಿ ರಾಜ್ಯದಲ್ಲಿಯೇ ಕೊನೆಯ ಸ್ಥಾನದಲ್ಲಿದ್ದ ಗದಗ ಜಿಲ್ಲೆ, ಈ ಬಾರಿ ಏಳು ಸ್ಥಾನ ಏರಿಕೆ ಕಂಡು 25ನೇ ಸ್ಥಾನ ಪಡೆದುಕೊಳ್ಳುವ ಮೂಲಕ ಆಶಾಭಾವನೆ ಮೂಡಿಸಿದೆ. ದ್ವಿತೀಯ ಪಿಯುಸಿ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಈ ಬಾರಿ ಗದಗ ಜಿಲ್ಲೆ ರಾಜ್ಯ ಮಟ್ಟದಲ್ಲಿ 25ನೇ ಸ್ಥಾನದಲ್ಲಿದೆ.
ಸತತ ಮೂರು ವರ್ಷಗಳಿಂದಲೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಳಪೆ ಸಾಧನೆ ತೋರುತ್ತಿದ್ದ ಗದಗ ಜಿಲ್ಲೆ ಈ ಬಾರಿ ತುಸು ಸುಧಾರಣೆ ಕಂಡಿರುವುದು ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಸ್ಥಾನ ಗಳಿಸಬಹುದಾದ ಆಸೆಗಳನ್ನು ಮೂಡಿಸಿದೆ.
ಸದ್ಯ ಗದಗ ಜಿಲ್ಲೆ ಶೇಕಡಾವಾರು ಫಲಿತಾಂಶದಲ್ಲಿ ಶೇ. 66.64ರಷ್ಟು ಫಲಿತಾಂಶ ದಾಖಲಿಸಿದೆ. ಆದರೆ, ಕಳೆದ ವರ್ಷ ಜಿಲ್ಲೆಯ ಫಲಿತಾಂಶ ಶೇ. 72.86 ಇತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ರಾಜ್ಯಮಟ್ಟದ ರ‍್ಯಾಂಗ್‌ನಲ್ಲಿ ಏರಿಕೆ ಕಂಡಿದ್ದರೂ ಶೇಕಡಾವಾರು ಫಲಿತಾಂಶದಲ್ಲಿ ಕುಸಿತ ಕಂಡಿದೆ.
ಜಿಲ್ಲೆಯ ಪಿಯುಸಿ ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಬಾಲಕಿಯರೇ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಒಟ್ಟಾರೆ ಶೇಕಡಾವಾರು ಫಲಿತಾಂಶದಲ್ಲಿ ಶೇ. 56.35 ಬಾಲಕರು ತೇರ್ಗಡೆಯಾಗಿದ್ದರೆ, ಶೇ. 74.94ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ ಮುಂಡರಗಿ ಜ.ಅ. ಪ.ಪೂ ಕಾಲೇಜಿನ ವಿಜಯಲಕ್ಷ್ಮಿ ಗೊನಬಾಳ ಶೇ. 97.83 ಫಲಿತಾಂಶದೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಗಜೇಂದ್ರಗಡದ ಎಸ್.ಎಂ. ಭೂಮರಡ್ಡಿ ಕಾಲೇಜಿನ ಸೌಂದರ್ಯ ನಿಂಬಾಲಗುಂದಿ ಶೇ. 96.33 ಅಂಕ ಪಡೆದು ದ್ವಿತೀಯ, ಲಕ್ಷ್ಮೇಶ್ವರದ ಎಸ್‌ಎಂಜೆವಿ ಕಾಲೇಜಿನ ಅಫ್ಸಾನಾ ಬೇಗಂ ನದಾಫ್ ಶೇ. 96 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಗದಗ ಜೆಟಿ ಕಾಲೇಜಿನ ನವತಿಕ ಹಜಾರಿ ಶೇ. 98.66 ಅಂಕಗಳೊಂದಿಗೆ ಪ್ರಥಮ, ಎಎಸ್‌ಎಸ್ ಕಾಲೇಜಿನ ವಿಜಯರಾಜ ಸಿದ್ಧಲಿಂಗ ಶೇ. 98.33 ಅಂಕ ಪಡೆದು ದ್ವಿತೀಯ, ಗಜೇಂದ್ರಗಡ ಎಸ್.ಎ. ಪಿಯು ಕಾಲೇಜಿನ ನಮೃತಾ ಪಾಟೀಲ ಶೇ. 98 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಗದಗ ಜೆಟಿ ಕಾಲೇಜಿನ ಕಾವ್ಯ ಹಿರೇಗೌಡ್ರ ಶೇ. 98.33 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ, ನರೇಗಲ್ ಎಸ್.ಎ. ಕಾಲೇಜಿನ ಕುಸುಮಾ ಪಟ್ಟಣಶೆಟ್ಟಿ ಶೇ. 97 ಅಂಕಗಳೊಂದಿಗೆ ದ್ವಿತೀಯ ಹಾಗೂ ಲಕ್ಷ್ಮೇಶ್ವರ ಸರಕಾರಿ ಪ.ಪೂ ಕಾಲೇಜಿನ ಲಕ್ಷ್ಮೀ ಜಗಳೂರು ಶೇ. 96.66 ಅಂಕ ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರಸ್ತುತ ಶೈಕ್ಷಣಿಕ ವರ್ಷದ ಆರಂಭದಿಂದಲೇ ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗಾಗಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಈ ಬಾರಿಯ ಫಲಿತಾಂಶ ಸುಧಾರಣೆಗೆ ಕಾರಣವಾಗಿದೆ. ರಾಜ್ಯಮಟ್ಟದಲ್ಲಿಯೇ ಈ ಬಾರಿ ಶೇಕಡಾವಾರು ಫಲಿತಾಂಶ ಕುಸಿತ ಕಂಡಿದೆ. ಹೀಗಾಗಿ ಗದಗ ಜಿಲ್ಲೆ ರಾಜ್ಯಮಟ್ಟದ ರ‍್ಯಾಂಕಿಗ್‌ನಲ್ಲಿ ಏರಿಕೆ ಕಂಡರೂ ಶೇಕಡವಾರು ಫಲಿತಾಶದಲ್ಲಿ ಶೇ. 6.2ರಷ್ಟು ಕುಸಿತ ಅನುಭವಿಸಿದೆ.
-ಎಸ್.ಬಿ. ಮಸನಾಯಕ.
ಉಪನಿರ್ದೇಶಕರು, ಪ.ಪೂ ಶಿಕ್ಷಣ ಇಲಾಖೆ, ಗದಗ.
ಹಾಜರಾದ ವಿದ್ಯಾರ್ಥಿಗಳು ಉತ್ತೀರ್ಣರಾದ ವಿದ್ಯಾರ್ಥಿಗಳು ಶೇಕಡಾ
ಗಂಡು – 4440 2502 56.35
ಹೆಣ್ಣು – 5896 4386 74.97
ಒಟ್ಟು – 10336 6888 66.64