ವಿಜಯಸಾಕ್ಷಿ ಸುದ್ದಿ, ಗದಗ/ಬೆಳಗಾವಿ: ರಾಜ್ಯದ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿ ನೋಂದಣಿಗೊಳಿಸಿ ಇ-ಖಾತಾ ವಿತರಸಲು, ರಾಜ್ಯದ ಸ್ಲಂ ನಿವಾಸಿಗಳ ಜನಸಂಖ್ಯೆ ಅನುಗುಣವಾಗಿ ರಾಜ್ಯ ಸರ್ಕಾರದ ಮುಂದಿನ ೨೦೨೫-೨೦೨೬ರ ಸಾಲಿನ ಬಜೆಟ್‌ನಲ್ಲಿ ಅನುದಾನವನ್ನು ಮೀಸಲಿಡಲು, ರಾಜ್ಯದ ಖಾಸಗಿ ಭೂ ಮಾಲಿಕತ್ವದಲ್ಲಿರುವ ಕೊಳಗೇರಿ ಪ್ರದೇಶಗಳನ್ನು ಸ್ಲಂ ಕಾಯ್ದೆ ಪ್ರಕಾರ ಘೋಷಣೆ ಮಾಡಿ ಸ್ಥಳೀಯ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹಾಗೂ ಇನ್ನು ಹಲುವಾರು ಬೇಡಿಕೆಗಳಿಗೆ ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಸಾವಿರಾರು ಸ್ಲಂ ನಿವಾಸಿಗಳು ಬೆಳಗಾವಿಯ ಸುವರ್ಣ ಸೌಧದ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರದ ಪರವಾಗಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಕರ್ನಾಟಕ ಕೊಳಗೆರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಮಾತನಾಡಿ, ರಾಜ್ಯದಲ್ಲಿ ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಪ್ರಸ್ತುತ ಬಜೆಟ್‌ನಲ್ಲಿ ಹಣ ಮೀಸಲಿಡುವುದು ಸೇರಿದಂತೆ ಸ್ಲಂ ಕಾಯ್ದೆಗೆ ವಿರುದ್ಧವಾಗಿರುವ ವಸತಿ ಇಲಾಖೆ ಸುತ್ತೋಲೆ ವಾಪಾಸಾತಿ ಹಾಗೂ ಲ್ಯಾಂಡ್ ಬ್ಯಾಂಕ್ ನೀತಿ ಕುರಿತಂತೆ ಪ್ರಸ್ತುತ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಮಾಡಲು ಈಗಾಗಲೇ ಸಮಯ ನಿಗದಿಯಾಗಿದೆ. ಸ್ಲಂ ಜನರ ಪರವಾದ ಕಾನೂನ ಮತ್ತು ನೀತಿಗಳನ್ನು ಜಾರಿಗೆ ತರಲು ಮುಖ್ಯಮಂತ್ರಿ ಮತ್ತು ವಸತಿ ಸಚಿವರ ಬೆಂಬಲದೊಂದಿಗೆ ಪ್ರಯತ್ನ ಮಾಡಲಾಗುವುದೆಂದು ಭರವಸೆ ನೀಡಿದರು.
ಸ್ಲಂ ಜನಾದೋಲನ-ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ರಾಜ್ಯ ಸಂಚಾಲಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ, ವಿಭಾಗೀಯ ಸಂಚಾಲಕರಾದ ಜನಾರ್ಧನ ಹಳ್ಳಿಬೆಂಚಿ, ಚಂದ್ರಮ್ಮ, ಶೋಭಾ ಕಮತರ, ಫಕ್ಕಿರಪ್ಪ ತಳವಾರ, ವೆಂಕಮ್ಮ, ರೇಣುಕಾ ಸರಡಗಿ, ರೇಣುಕಾ ಡಾವಣಗೇರಿ, ಅಕ್ರಮ ಮಸಾಳಕರ, ಅರುಣ ತುಮಕೂರ, ಗದಗ ಜಿಲ್ಲಾ ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮೆಹಬೂಬಸಾಬ ಬಳ್ಳಾರಿ, ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಖಾಜಾಸಾಬ ಇಸ್ಮಾಯಿಲನವರ, ರಿಜ್ವಾನ ಮುಲ್ಲಾ, ಮಂಜುನಾಥ ಶ್ರೀಗಿರಿ, ಮೆಹರುನಿಸಾ ಡಂಬಳ, ಮಕ್ತುಮಸಾಬ ಮುಲ್ಲಾನವರ, ಬಾಷಾಸಾಬ ಡಂಬಳ, ಸಲೀಮ ಹರಿಹರ ಹಾಗೂ ವಿವಿಧ ಜಿಲ್ಲೆಗಳ ಸ್ಲಂ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತ ಅಶೋಕ ಡಿ.ಆರ್ ಮಾತನಾಡಿ, ಈಗಾಗಲೇ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೋಂದಣಿಗೆ ಇ-ಖಾತಾ ತೊಡಕಾಗಿರುವ ಬಗ್ಗೆ ಮುಂದ್ರಾಕ ಇಲಾಖೆ ಎಐಜಿ ಅವರೊಂದಿಗೆ ಸಭೆ ನಡೆಸಿ ೯೪ಸಿಸಿ ಮಾದರಿಯಲ್ಲಿ ನೋಂದಣಿ ಮಾಡಿಕೊಡಲು ಒಪ್ಪಿಸಲಾಗಿದೆ. ಇದುವರೆಗೂ ೧.೮ ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ಬಾಕಿ ಇರುವ ಮನೆಗಳನ್ನು ಪೂರ್ಣಗೊಳಿಸಿ ಹಸ್ತಾಂತರಿಸಲಾಗುವುದು. ಎಲ್ಲಾ ವಿಭಾಗಗಳಿಂದ ಬಾಕಿ ಇರುವ ಸರ್ಕಾರಿ ಮತ್ತು ಖಾಸಗಿ ಕೊಳಚೆ ಪ್ರದೇಶಗಳ ಘೋಷಣೆಗೆ ಕ್ರಮವಹಿಸಲು ಸ್ಪಷ್ಟ ಸೂಚನೆ ನೀಡಲಾಗುವುದೆಂದು ಹೇಳಿದರು.