ಬೆಳಗಾವಿ: ಎಸ್ ಎಂ ಕೃಷ್ಣ ಅವರ ಅಗಲಿಕೆ ತುಂಬಾ ನೋವು ಉಂಟುಮಾಡಿದೆ ಎಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಎಸ್ ಎಂ ಕೃಷ್ಣ ಅವರು ಓರ್ವ ಅಜಾತ ಶತ್ರು ಆಗಿದ್ದರು. ಹಣಕಾಸು ಸಚಿವರಾಗಿ, ರಾಜ್ಯದ ಸಿಎಂ ಆಗಿ, ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಉತ್ತರ ಕರ್ನಾಟಕಕ್ಕೆ ನೀರಾವರಿ ಯೋಜನೆ ಕೊಡುಗೆ ನೀಡಿದ್ದಾರೆ. ನಾನು ರಾಜ್ಯಧ್ಯಕ್ಷನಾದ ಮೇಲೆ ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆದುಕೊಂಡು ಬಂದಿದ್ದೆ. ಅವರ ಅಗಲಿಕೆ ತುಂಬಾ ನೋವು ಉಂಟುಮಾಡಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅವರನ್ನು ಭೇಟಿಯಾಗಿ ಅವರ ಮಾತುಗಳನ್ನು ಕೇಳಿ ಅವರ ಮಾರ್ಗದರ್ಶನ ಕೇಳಿದರೆ ರೋಮಾಂಚನವಾಗಿತ್ತು. ನಮ್ಮಲ್ಲೂ ಇನ್ನೂ ಕೆಲಸ ಮಾಡಬೇಕೆನ್ನುವ ಉತ್ಸಾಹ ಬರುತ್ತಿದೆ ಎಂದು ಹೇಳಿ ಬೆನ್ನುತಟ್ಟಿದ್ದರು. ಅವರ ಆತ್ಮಕ್ಕೆ ಚಿರ ಶಾಂತಿಯನ್ನು ದೇವರು ಕರುಣಿಸಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ, ಎಸ್ ಎಂ ಕೃಷ್ಣ ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗುತ್ತೇನೆ” ಎಂದು ಹೇಳಿದರು.