ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಯುವ ಸಮೂಹವು ಗ್ರಾಮಗಳಲ್ಲಿ ನೈರ್ಮಲ್ಯ, ಆರೋಗ್ಯ ಹಾಗೂ ಶಿಕ್ಷಣದ ಪ್ರಾಮುಖ್ಯತೆಯನ್ನು ಗ್ರಾಮಸ್ಥರಲ್ಲಿ ಮೂಡಿಸಲು ಮುಂದಾಗಬೇಕು ಎಂದು ತಾ.ಪಂ ಮಾಜಿ ಉಪಾಧ್ಯಕ್ಷ ಶಶಿಧರ ಹೂಗಾರ ಹೇಳಿದರು.
ಸಮೀಪದ ಕಾಲಕಾಲೇಶ್ವರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪಟ್ಟಣದ ಎಸ್.ಎಂ. ಭೂಮರಡ್ಡಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ದೇಶದ ಉಜ್ವಲ ಭವಿಷ್ಯದ ನಿರ್ಮಾತೃಗಳಾದ ಯುವ ಪೀಳಿಗೆ ಶಿಕ್ಷಣದೊಂದಿಗೆ ಗ್ರಾಮಾಭಿವೃದ್ಧಿಯ ಪರಿಕಲ್ಪನೆ ಪಡೆದುಕೊಂಡು, ಬದುಕಿಗೆ ಬೇಕಾದ ಮೌಲ್ಯಯುತ ಶಿಕ್ಷಣ ಪಡೆಯಲು ಎನ್‌ಎಸ್‌ಎಸ್ ಸಹಕಾರಿಯಾಗಿದೆ.
ಕಾಲಕಾಲೇಶ್ವರ ಗ್ರಾಮವು ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇಲ್ಲಿನ ಕಾಲಭೈರವನ ದೇವಸ್ಥಾನವು ದಕ್ಷಿಣಕಾಶಿ ಎಂದು ಪ್ರಸಿದ್ಧಿ ಪಡೆದಿದ್ದು, ಗ್ರಾಮದಲ್ಲಿನ ಪುಷ್ಕರಣಿ ಸೇರಿ ಅನೇಕ ಇತಿಹಾಸವಿದೆ. ಹೀಗಾಗಿ ಗ್ರಾಮದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಪಾಲ್ಗೊಂಡಿರುವ ಶಿಬಿರಾರ್ಥಿಗಳು ನೈರ್ಮಲ್ಯ, ಆರೋಗ್ಯ ಹಾಗೂ ಶಿಕ್ಷಣದ ಪ್ರಾಮುಖ್ಯತೆಯನ್ನು ಗ್ರಾಮಸ್ಥರಲ್ಲಿ ಮೂಡಿಸಲು ಶ್ರಮಿಸಿ, ಗ್ರಾಮಗಳು ಸ್ವಚ್ಛ ಹಾಗೂ ಸುಂದರ ಗ್ರಾಮಗಳನ್ನಾಗಿ ನಿರ್ಮಿಸಲು ಪ್ರಯತ್ನಿಸಬೇಕು. ರಾಷ್ಟç ಮತ್ತು ರಾಜ್ಯದ ಅಭಿವೃದ್ಧಿಯಲ್ಲಿ ನೈಜ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದರು.
ಪ್ರಾಚಾರ್ಯ ಜೆ.ಬಿ. ಗುಡಿಮನಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ, ಸಾಮಾಜಿಕ ಸೇವಾಗುಣ, ನಾಯಕತ್ವ ಗುಣದ ಜತೆಗೆ ಸಹಬಾಳ್ವೆ ಮತ್ತು ಸಮುದಾಯ ಅಭಿವೃದ್ಧಿ ಸೇರಿ ಅನೇಕ ಮೌಲ್ಯಗಳನ್ನು ಕಲಿಸಿಕೊಡಲು ಸಹಕಾರಿ ಎಂದರು.
ರಾಜೂರ ಗ್ರಾ.ಪಂ ಸದಸ್ಯ ಮುತ್ತಣ್ಣ ತಳವಾರ, ಎಸ್‌ಡಿಎಂಸಿ ಅಧ್ಯಕ್ಷ ಕಳಕಪ್ಪ ತಳವಾರ, ಪರಶುರಾಮ ಚಿಲ್‌ಝರಿ, ಮೃತ್ಯುಂಜಯ ಹಿರೇಮಠ, ಶಿಬಿರಾಧಿಕಾರಿ ಎಸ್.ಎಸ್. ವಾಲಿಕಾರ, ಜ್ಯೋತಿ ಎಸ್, ವಾಯ್.ಆರ್. ಸಕ್ರೋಜಿ, ಎಸ್.ಎಂ. ಹುನಗುಂದ, ಪ್ರೇಮಾ ಚುಂಚಾ ಮುಂತಾದವರಿದ್ದರು.