ಬೆಂಗಳೂರು: ಸ್ಮಾರ್ಟ್ ವಿದ್ಯುತ್ ಮೀಟರ್ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಇಂಧನ ಇಲಾಖೆ ವಿರುದ್ಧ ಬಿಜೆಪಿ ಸಮರ ಸಾರಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಕೆಜೆ ಜಾರ್ಜ್ ಅವರಿಗೆ ಬಿಗ್ ರಿಲೀಫ್ ದೊರಕಿದೆ.
ಹೌದು ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ನಡೆಸಿದ ತನಿಖಾ ವರದಿಯನ್ನು ಕೋರ್ಟ್ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಮಾಡಿತ್ತು. ಇದನ್ನು ಪ್ರಶ್ನಿಸಿ, ಸಚಿವ ಕೆಜೆ ಜಾರ್ಜ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಲೋಕಾಯುಕ್ತ ಎಸ್ಪಿ ಹಾಗೂ ದೂರುದಾರರಾದ ಬಿಜೆಪಿ ನಾಯಕರಾದ ಸಿಎನ್ ಅಶ್ವಥ್ ನಾರಾಯಣ್, ಎಸ್ ಆರ್ ವಿಶ್ವನಾಥ್, ಧೀರಜ್ ಮುನಿರಾಜು ಅವರಿಗೆ ನೋಟಿಸ್ ನೀಡಿದೆ.
ಲೋಕಾಯುಕ್ತ ಪೊಲೀಸರಿಂದ ವರದಿ ನೀಡುವಂತೆ ವಿಚಾರಣಾಧೀನ ನ್ಯಾಯಾಲಯ ಮಾಡಿರುವ ಆದೇಶಕ್ಕೆ ತಡೆ ನೀಡಿ ಹೈಕೋರ್ಟ್ ಎರಡು ವಾರ ವಿಚಾರಣೆ ಮುಂದೂಡಿದೆ. ಈ ಮೂಲಕ ಸಚಿವ ಜಾರ್ಜ್ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.