ಈ ಹಿಂದೆ ಗ್ರಾ.ಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಖಾದರಬಿ ಮುಜಾವರ (ಡಾಲಾಯತ) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಸೂಡಿ ಗ್ರಾ.ಪಂ ಒಟ್ಟು 17 ಸದಸ್ಯರುಗಳ ಬಲವನ್ನು ಹೊಂದಿದ್ದು, ಅದರಲ್ಲಿ 11 ಕಾಂಗ್ರೆಸ್ ಬೆಂಬಲಿತ ಸದಸ್ಯರು, 6 ಜನ ಬಿಜೆಪಿ ಬೆಂಬಲಿತ ಸದಸ್ಯರು ಇದ್ದರು.. ಸಂಖ್ಯಾಬಲವಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಸೋಲನ್ನು ಅನುಭವಿಸಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ.
ತೆರವಾದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಗಂಗವ್ವ ಗೊರವರ ನಾಮಪತ್ರ ಸಲ್ಲಿಸಿದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಆಶಾಬೇಗಂ ಮೊಕಾಶಿ ಎಂಬುವರು ನಾಮಪತ್ರ ಸಲ್ಲಿಸಿದರು. ನಂತರ ನಡೆದ ಬೆಳವಣಿಗೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಶಾಬೇಗಂ ಮೊಕಾಶಿ 9 ಮತಗಳನ್ನು ಪಡೆದು ಗೆದ್ದು ಬೀಗಿದರು. ಸ್ಪಷ್ಟ ಬಹುಮತ ಹೊಂದಿದ್ದರೂ ಸಹ ಕಾಂಗ್ರೆಸ್ ಅಭ್ಯರ್ಥಿ ಗಂಗವ್ವ ಗೊರವರ ಪರಾಭವಗೊಂಡರು.
ಸ್ಪಷ್ಟ ಬಹುಮತ ಹೊಂದಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಪರಾಭವಗೊಂಡಿದ್ದು ಕಾಂಗ್ರೆಸ್ ಮುಖಂಡರಲ್ಲಿ ಮುಜುಗರ ತರಿಸಿತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಆಡಳಿತ ವ್ಯವಸ್ಥೆಯಿಂದ ದೂರ ಉಳಿದಿದ್ದಾರೆ.