ವಿಜಯಸಾಕ್ಷಿ ಸುದ್ದಿ, ಡಂಬಳ : ಹಾವೇರಿ-ಗದಗ ಕ್ಷೇತ್ರದ ಲೋಕಸಭಾ ಚುನಾವಣೆಯ ಮತದಾನವು ಡಂಬಳ ಹೋಬಳಿಯ 11 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ 26 ಗ್ರಾಮಗಳ 61 ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಜರುಗಿತು.
ಡಂಬಳ ಸೇರಿದಂತೆ ಜಂತ್ಲಿ ಶಿರೂರ, ಪೇಠಾ ಆಲೂರ, ಡೋಣಿ, ಹಳ್ಳಿಗುಡಿ, ಹಳ್ಳಿಕೇರಿ, ಶಿವಾಜಿ ನಗರ, ಕದಂಪೂರ, ಯಕ್ಲಾಸಾಪೂರ, ಜಂತ್ಲಿ ಶಿರೂರ, ಹರ್ಲಾಪೂರ, ಬರದೂರ, ರಾಮೇನಲ್ಲಿ, ನಾರಾಯಣಪೂರ, ಗುಡ್ಡದ ಬೂದಿಹಾಳ, ಅತ್ತಿಕಟ್ಟಿ ತಾಂಡಾ, ಕಬಲಾದಕಟ್ಟಿ ತಾಂಡ, ಶಿವಾಜಿನಗರ, ಚುರ್ಚಿಹಾಳ ಸೇರಿದಂತೆ ಡಂಬಳ ಹೋಬಳಿಯ ಎಲ್ಲಾ ಗ್ರಾಮಗಳಲ್ಲಿ ಯುವ ಮತದಾರರು ತಮ್ಮ ಮೊದಲ ಸಲ ಮತದಾನ ಮಾಡಿ ಸೆಲ್ಪಿ ತೆಗೆದುಕೊಂಡು ಸಂತಸಪಟ್ಟರೆ, ಬರಗಾಲದ ಹಿನ್ನೆಲೆಯಲ್ಲಿ ಬೇರೆ ನಗರಗಳಿಗೆ ವಲಸೆ ಹೋದವರು ತಮ್ಮ ಗ್ರಾಮಗಳಿಗೆ ತೆರಳಿ ತಮ್ಮ ಮತ ಚಲಾಯಿಸಿದರು.
ಹಿರೇವಡ್ಡಟ್ಟಿ ಗ್ರಾಮದ 104 ವರ್ಷ ವಯಸ್ಸಿನ ಶತಾಯುಷಿ ಅಂದವ್ವ ಸನ್ನಶಿವರುದ್ರಯ್ಯ ಹಿರೇಮಠ ಹಿರೇವಡ್ಡಟ್ಟಿ ಗ್ರಾಮದ ಶಿವಾಚಾರ್ಯ ಶ್ರೀಗಳ ಸಹಾಯದಿಂದ ಮತಗಟ್ಟೆಯವರೆಗೆ ನಡೆದುಕೊಂಡು ಬಂದು ಮತದಾನವನ್ನು ಮಾಡಿದರು. ಡೋಣಿ ತಾಡಾ ಗ್ರಾಮದ 103 ವರ್ಷ ವಯಸ್ಸಿನ ಸೀತವ್ವ ಲಮಾಣಿ ಸ್ವತಃ ನಡೆದುಕೊಂಡು ಬಂದು ಮತದಾನ ಮಾಡಿದರು.
ತಹಸೀಲ್ದಾರ ದನಂಜಯ್ಯ ಮಾಲಗಿತ್ತಿ, ಇಓ ವಿಶ್ವನಾಥ ಹೊಸಮನಿ, ಪಿಡಿಓ ಶಶಿದರ ಹೊಂಬಳ, ಡಂಬಳ ಹೋಬಳಿಯ ಚುನಾವಣಾ ಅಧಿಕಾರಿಗಳು, ಪಿಆರ್‌ಓ, ಎಪಿಆರ್‌ಓ, ಎಪಿಎಲ್‌ಒ, ಸಹಾಯಕರು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಆಶಾ/ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ನಿಯೋಜಿತ ಸಿಬ್ಬಂದಿಗಳು ಚುನಾವಣಾ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದರು.