ಬೆಂಗಳೂರು:- ಪುಷ್ಪ ಸಿನಿಮಾ ಸ್ಟೈಲ್ ನಲ್ಲಿ ಶ್ರೀಗಂಧ ತುಂಡುಗಳ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಶೇಖ್ ಶಾರೂಕ್, ಶೇಖ್ ಅಬ್ದುಲ್, ಪರಮೇಶ್, ರಾಮ್ ಭೂಪಾಲ್ ಬಂಧಿತರು. ಎಸ್, ಪುಷ್ಪ ಸಿನಿಮಾದಲ್ಲಿ ರಕ್ತಚಂದನ ಸ್ಮಗ್ಲಿಂಗ್ ಹೇಗೆಲ್ಲಾ ಮಾಡ್ತಾರೆ ಅಂತಾ ನೋಡಿರುತ್ತೀರಿ. ಇದನ್ನೇ ಪ್ರೇರಣೆಯಾಗಿ ತೆಗೆದುಕೊಂಡು ಖತರ್ನಾಕ್ ಶ್ರೀಗಂಧ ಕಳ್ಳರು ಈರುಳ್ಳಿ ಮೂಟೆಯಲ್ಲಿ ಶ್ರೀಗಂಧ ಸಾಗಿಸಿ ಲಾಕ್ ಆಗಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್‌ನಿಂದ ಬೆಂಗಳೂರಿಗೆ ಶ್ರೀಗಂಧವನ್ನ ತಂದು ಇನ್ನೇನು ಡೆಸ್ಟಿನೇಷನ್‌ಗೆ ರೀಚ್ ಆಗಬೇಕು ಅನ್ನುವಷ್ಟರಲ್ಲಿ ನಾಕಾಬಂದಿ ಹಾಕಿ ತಪಾಸಣೆ ಮಾಡುತ್ತಿದ್ದ ಸಿದ್ದಾಪುರ ಪೊಲೀಸರಿಗೆ ಶ್ರೀಗಂಧದ ಮರಗಳ ಸಮೇತ ನಾಲ್ವರು ಲಾಕ್ ಆಗಿದ್ದಾರೆ.
ಸಿರಾಜ್ ಎಂಬಾತ ತನ್ನ ಗ್ಯಾಂಗ್‌ನೊಂದಿಗೆ ಆಂಧ್ರದ ಕರ್ನೂಲ್ ಕಾಡುಗಳಲ್ಲಿ ಶ್ರೀಗಂಧ ಕಡಿದು ಈರುಳ್ಳಿ ಮಾರಾಟಗಾರರ ವೇಷದಲ್ಲಿ ಬೆಂಗಳೂರಿಗೆ ತಂದು ಇಲ್ಲಿಂದ ಚೀನಾಗೆ ಸಪ್ಲೈ ಮಾಡುತ್ತಿದ್ದ. ಸಿದ್ಧಾಪುರ ಪೊಲೀಸರು ನಾಕಾಬಂದಿ ಹಾಕಿ ಪರಿಶೀಲನೆ ನಡೆಸಿದಾಗ ಈರುಳ್ಳಿ ಮೂಟೆಗಳಲ್ಲಿ 18 ಶ್ರೀಗಂಧದ ಮರದ ತುಂಡುಗಳ ಬ್ಯಾಗ್ ಜಪ್ತಿಯಾಗಿದೆ. ಆಂಧ್ರದ ಸಿರಾಜ್ ತನ್ನ ಗ್ಯಾಂಗ್ ಸದಸ್ಯರೊಂದಿಗೆ ಶ್ರೀಗಂಧ ಕಡಿದು, ಅಕ್ರಮವಾಗಿ ಖರೀದಿ ಮಾಡಿ ಬೆಂಗಳೂರಿನ ಡೀಲರ್‌ಗೆ ತಲುಪಿಸಿ ಬಳಿಕ ಚೀನಾಗೆ ತಲುಪಿಸುತ್ತಿದ್ದರು. ಈ ಸಂಬಂಧ ನಾಲ್ವರು ಸ್ಮಗ್ಲರ್ ಗಳು ಖಾಕಿ ಬಲೆಗೆ ಬಿದ್ದಿದ್ದಾರೆ.
ಶ್ರೀಗಂಧ ಅಕ್ರಮ ಸಾಗಾಟದ ಜಾಲದ ಹಿಂದೆ ಬಿದ್ದಿರುವ ಪೊಲೀಸರು ತಲೆಮರೆಸಿಕೊಂಡಿರುವ ಬೆಂಗಳೂರಿನ ಡೀಲರ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


