ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ಗಂಭೀರ ಲಂಚ ಆರೋಪ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ಸಿಸಿಬಿ ವಿಚಾರಣೆ ಬಳಿಕ ಮಹತ್ವದ ಸ್ಪಷ್ಟನೆ ನೀಡಿದ್ದಾರೆ.ಶಾಲಿನಿ ರಜನೀಶ್ ವಿರುದ್ಧ 1.60 ಕೋಟಿ ರೂಪಾಯಿ ಲಂಚದ ಆರೋಪ ಮಾಡಿದ್ದ ಅವರು,
ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರು ಸಿಎಸ್‌ಗೆ ಲಂಚ ನೀಡಿ ಮುಂಬಡ್ತಿ ಪಡೆದಿದ್ದಾರೆಂದು ಹೇಳಿಕೆ ನೀಡಿದ್ದರು. ಈ ಆರೋಪಗಳು ರಾಜ್ಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದವು.
ನಿನ್ನೆಯಷ್ಟೇ ಸಿಸಿಬಿ ಅಧಿಕಾರಿಗಳು ಸ್ನೇಹಮಯಿ ಕೃಷ್ಣರನ್ನು ವಶಕ್ಕೆ ಪಡೆದು ಸುಮಾರು 23 ಗಂಟೆಗಳ ಕಾಲ ತೀವ್ರ ವಿಚಾರಣೆ ನಡೆಸಿದರು. ಅವರು ಬಿಡುಗಡೆ ಮಾಡಿದ ಆಡಿಯೋವನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ಧರಾಗಿದ್ದ ಸಂದರ್ಭದಲ್ಲೇ ವಶಕ್ಕೆ ಪಡೆಯಲಾಗಿತ್ತು. ಮೈಸೂರಿನ ಎರಡು ಮನೆಗಳು ಹಾಗೂ ಒಂದು ಕಚೇರಿಯ ಮೇಲೂ ದಾಳಿ ನಡೆಸಿ ಕೆಲವು ಪ್ರಮುಖ ದಾಖಲೆಗಳನ್ನು ಸೀಜ್ ಮಾಡಲಾಗಿದೆ.
ವಿಚಾರಣೆ ಬಳಿಕ ಸ್ನೇಹಮಯಿ ಕೃಷ್ಣ, ಆಡಿಯೋ ನಿಜವಾದದ್ದೇ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಶಾಲಿನಿ ರಜನೀಶ್ ವಿರುದ್ಧ ಮಾಡಿದ್ದ ಲಂಚದ ಆರೋಪ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಮುಡಾ ಪ್ರಕರಣಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.
ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ವಿರುದ್ಧ ಮಾಡಿದ ಆರೋಪ ಮಾತ್ರ ಸರಿಯೇ ಇದೆ ಎಂದು ತಿಳಿಸಿದ್ದಾರೆ. ನಟೇಶ್ ಮತ್ತು ವಿನೋದ್ ನಡುವೆ ಹಣಕಾಸಿನ ವ್ಯವಹಾರ ನಡೆದಿತ್ತು. ಈ ವಿಷಯದಲ್ಲಿ ತಮ್ಮನ್ನು ಬಳಸಿಕೊಳ್ಳಲು ಪ್ರಯತ್ನ ಮಾಡಲಾಗಿತ್ತು ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಪ್ರಕರಣ ಸಂಬಂಧ ಸಿಸಿಬಿ ತನಿಖೆ ಮುಂದುವರಿದಿದೆ.



