ಬೆಂಗಳೂರು: ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬಂಧನಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, “ಸ್ನೇಹಮಯಿ ಕೃಷ್ಣ ಬಂಧನ ದುರಾಡಳಿತದ ಪರಮಾವಧಿ. ಕರ್ನಾಟಕದಲ್ಲಿ ಈ ಸರ್ಕಾರ ಎಮರ್ಜೆನ್ಸಿ ಸ್ಥಿತಿ ತಂದಂತಾಗಿದೆ” ಎಂದು ಕಿಡಿಕಾರಿದರು.
ಮುಡಾ ಪ್ರಕರಣದ ವಿರುದ್ಧ ಸ್ನೇಹಮಯಿ ಕೃಷ್ಣ ಹೋರಾಟ ನಡೆಸಿದ್ದರು. ಈ ವಿಚಾರದಲ್ಲಿ ನಾವು ಸಹ ಪಾದಯಾತ್ರೆ ಮಾಡಿದ್ದೇವೆ. ಇದನ್ನು ಸರ್ಕಾರ ಸಹಿಸಿಕೊಳ್ಳಲಾಗದೆ, ನ್ಯಾಯಕ್ಕಾಗಿ ಕೋರ್ಟ್ ಮೂಲಕ ಹೋರಾಟ ನಡೆಸುತ್ತಿರುವ ವ್ಯಕ್ತಿಯನ್ನು ಬಂಧಿಸಿದೆ ಎಂದು ಆರೋಪಿಸಿದರು.
“ಗಾಂಧೀ ಆದರ್ಶಗಳಿಗೆ ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ. ನ್ಯಾಯದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ” ಎಂದು ಆರ್. ಅಶೋಕ್ ಆರೋಪಿಸಿದರು.
ಮುಡಾದ ಮಾಜಿ ಆಯುಕ್ತ ಡಿ.ಬಿ ನಟೇಶ್ ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಸೈಬರ್ ಪೊಲೀಸರು ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಿರುವುದು ತಿಳಿದುಬಂದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.



