HomeGadag Newsಸಮಾಜ ಬಾಂಧವರು ಪರಿವರ್ತನೆಯ ಹಾದಿಯಲ್ಲಿ ಸಾಗಿ: ಮಾಜಿ ಸಚಿವ ಬಿ. ಶ್ರೀರಾಮುಲು

ಸಮಾಜ ಬಾಂಧವರು ಪರಿವರ್ತನೆಯ ಹಾದಿಯಲ್ಲಿ ಸಾಗಿ: ಮಾಜಿ ಸಚಿವ ಬಿ. ಶ್ರೀರಾಮುಲು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜ್ಯಾದ್ಯಂತ ವಾಲ್ಮೀಕಿ ಜಯಂತಿ ಆಚರಿಸಲ್ಪಡುತ್ತಿದ್ದು, ಜಯಂತಿ ಆಚರಣೆ ನೆಪಮಾತ್ರಕ್ಕೆ ಆಗುವುದು ಬೇಡ. ವರ್ಷದಿಂದ ವರ್ಷಕ್ಕೆ ಸಮಾಜ ಬಾಂಧವರು ಪರಿವರ್ತನೆಯ ಹಾದಿಯಲ್ಲಿ ಸಾಗುವಂತಾಗಬೇಕು. ಬದಲಾವಣೆಯೊಂದಿಗೇ ಬೆಳೆಯುತ್ತಾ ಹೋಗಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅಭಿಪ್ರಾಯಪಟ್ಟರು.

ಅವರು ಲಕ್ಷ್ಮೇಶ್ವರ ತಾಲೂಕು ಮಹರ್ಷಿ ವಾಲ್ಮೀಕಿ ನಾಯಕ ವಿವಿಧೋದ್ದೇಶಗಳ ಸಂಘದ ವತಿಯಿಂದ ಸೋಮವಾರ ಪಟ್ಟಣದ ತೇರಿನ ಮನೆ ಆವರಣದಲ್ಲಿ ಜರುಗಿದ ಮಹರ್ಷಿ ವಾಲ್ಮೀಕಿ ಹಾಗೂ ವೀರ ಮದಕರಿ ನಾಯಕ ಜಯಂತಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗೆ ಚಾಲನೆ ನೀಡಿದ್ದರು. ನಾನು ಸಚಿವನಾಗಿದ್ದಾಗ ಎಸ್‌ಟಿ ಜನಾಂಗಕ್ಕೆ ಶೇ. 3ರಷ್ಟಿದ್ದ ಮೀಸಲಾತಿಯನ್ನು ಶೇ. 7ಕ್ಕೆ ಹೆಚ್ಚಿಸಿದ್ದೇನೆ. ಇದಕ್ಕೆ ನಮ್ಮ ರಾಜನಹಳ್ಳಿ ವಾಲ್ಮೀಕಿ ಪೀಠದ ಜಗದ್ಗುರು ಡಾ. ಪ್ರಸನ್ನಾನಂದಪುರಿ ಸ್ವಾಮೀಜಿಯವರ ಬೆಂಬಲ ಹಾಗೂ ಆಶೀರ್ವಾದ ಇತ್ತು. ಸದ್ಯ ರಾಜ್ಯ ಸರ್ಕಾರ ಸಮುದಾಯವನ್ನು ಉಳಿಸುವ ಕೆಲಸ ಮಾಡುತ್ತಿಲ್ಲ. ಸಿದ್ದರಾಮಯ್ಯನವರ ಸರ್ಕಾರ 187 ಕೋಟಿ ರೂಪಾಯಿ ವಾಲ್ಮೀಕಿ ನಿಗಮದ ಹಣವನ್ನು ನುಂಗಿ ನೀರು ಕುಡಿದಿದೆ. ಕೇವಲ ನೆಪಕ್ಕೆ ಮಾತ್ರ ಹಿಂದುಳಿದ ಮುಖ್ಯಮಂತ್ರಿ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ. ಅವರಿಗೆ ಹಿಂದುಳಿದ ನಾಯಕರನ್ನೇ ಮುಖ್ಯಮಂತ್ರಿ ಮಾಡುವ ಉದ್ದೇಶ ಇದ್ದರೆ ಸತೀಶ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಲಿ ಎಂದು ಸವಾಲು ಹಾಕಿದರು.

ಸಾನ್ನಿಧ್ಯ ವಹಿಸಿದ್ದ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಡಾ. ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ವಾಲ್ಮೀಕಿ ಸಮಾಜ ಧೈರ್ಯ, ಸಾಹಸ, ಶೌರ್ಯಕ್ಕೆ ಹೆಸರಾಗಿದೆ. ದೊಡ್ಡ ಸಮಾಜ ಆಗಿರುವ ವಾಲ್ಮೀಕಿ ಜನಾಂಗ ತಮ್ಮಲ್ಲಿನ ವೈಮನಸ್ಸುಗಳನ್ನು ಮರೆತು ಸಮಾಜ ಕಟ್ಟಲು ಮುಂದಾಗಬೇಕು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಉತ್ತಮ ನಾಗರಿಕರನ್ನಾಗಿ ತಯಾರು ಮಾಡುವ ಜವಾಬ್ದಾರಿ ಪಾಲಕರ ಮೇಲಿದೆ. ರಾಜಕೀಯವಾಗಿ ಸಾಕಷ್ಟು ಪ್ರಬುದ್ಧತೆ ಪಡೆದಿರುವ ನಾಯಕರು ವಾಲ್ಮೀಕಿ ಸಮಾಜದಲ್ಲಿದ್ದಾರೆ. ಆದರೆ ಅವರಿಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ಕಾರಣ ಸಮಾಜ ಬಾಂಧವರು ಒಗ್ಗಟ್ಟಾಗಿ ಹಕ್ಕುಗಳ ಪ್ರತಿಪಾದನೆಗೆ ಪ್ರಯತ್ನಿಸಬೇಕು ಎಂದು ಹೇಳಿದರು.

ತಾಲೂಕು ಮಹರ್ಷಿ ವಾಲ್ಮೀಕಿ ನಾಯಕ ವಿವಿಧೋದ್ದೇಶಗಳ ಸಂಘದ ಅಧ್ಯಕ್ಷ ಭೀಮಣ್ಣ ಯಂಗಾಡಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿದರು.

ಈ ಸಂದರ್ಭದಲ್ಲಿ ಸಣ್ಣವೀರಪ್ಪ ಹಳ್ಳೆಪ್ಪನವರ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣವರ, ಸುನೀಲ ಮಹಾಂತಶೆಟ್ಟರ, ನಾಗರಾಜ ಮಡಿವಾಳರ, ಹನಮಂತ ಜಾಲಿಮರದ, ನಾಗರಾಜ ಕುಲಕರ್ಣಿ, ಫಕ್ಕೀರೇಶ ಮ್ಯಾಟಣ್ಣವರ, ರಾಜು ಓಲೇಕಾರ, ವಿಜಯ ಕರಡಿ, ಯಲ್ಲಪ್ಪ ತಳವಾರ, ಎನ್.ಎನ್. ನೆಗಳೂರ, ಮಂಜುನಾಥ ಮಾಗಡಿ, ಹೊನ್ನಪ್ಪ ವಡ್ಡರ, ಶಿವನಗೌಡ ನಾಯಕ್ ಮತ್ತಿತರರು ಇದ್ದರು. ಕೆ.ಎನ್. ಪ್ರಭುರಾಜ ಉಪನ್ಯಾಸ ನೀಡಿದರು. ಬಸವರಾಜ ಗಳಗನಾಥ, ದೊಡ್ಡಪ್ಪ ವಾಲ್ಮೀಕಿ ನಿರೂಪಿಸಿದರು.

ವಿ.ಪಿ. ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ನಮ್ಮ ಸಮಾಜದಲ್ಲಿ ಇನ್ನೂ ಬಾಲ್ಯ ವಿವಾಹ ನಡೆಯುತ್ತಿದೆ. ಇದಕ್ಕೆ ಶಿಕ್ಷಣದ ಕೊರತೆಯೇ ಪ್ರಮುಖ ಕಾರಣ. ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಸಮಾಜಕ್ಕೆ ಉಪಯೋಗ ಆಗುತ್ತಿಲ್ಲ. ರಾಜ್ಯ ಸರ್ಕಾರ ಸತೀಶ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಮಾಡಿದರೆ ನಮ್ಮ ಸಮಾಜಕ್ಕೆ ಸಂತಸವಾಗುತ್ತದೆ ಎಂದು ತಿಳಿಸಿದರು.

“ಶಿಕ್ಷಣ ಮತ್ತು ಉತ್ತಮ ಸಂಸ್ಕಾರದಿಂದ ಮಾತ್ರ ಸಮಾಜ ಉದ್ಧಾರ ಆಗಬಲ್ಲದು. ಆದ್ದರಿಂದ ವಾಲ್ಮೀಕಿ ನಾಯಕ ಜನಾಂಗದವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣ ಎಂದಿಗೂ ಪೂಜ್ಯನೀಯ. ಅವರು ರಚಿಸಿದ ರಾಮಾಯಣ ಮಹಾಕಾವ್ಯ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಭಾರತೀಯರ ಬದುಕಿನಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿವೆ. ಇವರೆಡೂ ಎಂದಿಗೂ ಅಜರಾಮರವಾಗಿ ಉಳಿಯುತ್ತವೆ”

ಬಿ. ಶ್ರೀರಾಮುಲು.
ಮಾಜಿ ಸಚಿವರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!