ಯಾದಗಿರಿ:- ಜಿಲ್ಲೆಯ ಶಹಾಪುರದಲ್ಲಿ ಸಾಮಾಜಿಕ ಬಹಿಷ್ಕಾರದ ಘಟನೆ ಬೆಳಕಿಗೆ ಬಂದಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ಸ್ವಕುಳಿಸಾಳಿ ಸಮುದಾಯದ 20 ಕುಟುಂಬಗಳ ವಿರುದ್ಧ ಸಮುದಾಯದ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಬಹಿಷ್ಕಾರ ಘೋಷಿಸಿದ್ದಾಗಿ ಆರೋಪಿಸಲಾಗಿದೆ. ಸಂಘದ ಆಸ್ತಿ ಮತ್ತು ಆದಾಯದ ಲೆಕ್ಕ ಕೇಳಿದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಹಿಷ್ಕೃತ ಕುಟುಂಬಗಳು ಹೇಳಿವೆ.
ಶಹಾಪುರದಲ್ಲಿರುವ ಜೀಹ್ವೆಶ್ವರ ಕಲ್ಯಾಣ ಮಂಟಪ ಮತ್ತು 18 ವಾಣಿಜ್ಯ ಮಳಿಗೆಗಳಿಂದ ವರ್ಷಕ್ಕೆ ಸುಮಾರು 25 ಲಕ್ಷ ರೂ. ಆದಾಯ ಬರುತ್ತಿದೆ ಎನ್ನಲಾಗಿದ್ದು, ಅದರ ಲೆಕ್ಕಪತ್ರ ಕುರಿತು ಪ್ರಶ್ನೆ ಮಾಡಿದ ಕುಟುಂಬಗಳ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂಬ ಆರೋಪವಿದೆ. 20 ಕುಟುಂಬಗಳ ಪೈಕಿ ಎಂಟು ಕುಟುಂಬಗಳು ದಂಡ ಪಾವತಿಸಿದ ಬಳಿಕ ಬಹಿಷ್ಕಾರದಿಂದ ಮುಕ್ತಿಗೊಂಡಿದ್ದರೆ, ಉಳಿದ 12 ಕುಟುಂಬಗಳು ದಂಡ ಕಟ್ಟಲು ನಿರಾಕರಿಸಿದ ಕಾರಣ ಇನ್ನೂ ಸಾಮಾಜಿಕ ಬಹಿಷ್ಕಾರ ಎದುರಿಸುತ್ತಿವೆ.
ಬಹಿಷ್ಕೃತ ಕುಟುಂಬಗಳೊಂದಿಗೆ ಮದುವೆ ಸಂಬಂಧ ಮಾಡಬಾರದು, ಪಡೆಯಬಾರದು ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ. ಜೊತೆಗೆ ಜೀಹ್ವೇಶ್ವರ, ಹನುಮ ಮತ್ತು ಕೃಷ್ಣ ಜಯಂತಿ ಸೇರಿದಂತೆ ಸಮುದಾಯದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತಿಲ್ಲ ಎಂದು ಅವರು ದೂರಿದ್ದಾರೆ. ಇತ್ತೀಚೆಗೆ ಜೀಹ್ವೇಶ್ವರ ಜಯಂತಿ ಅಂಗವಾಗಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಬಾಲಕನನ್ನು ನಿಂದಿಸಿ ಕಳುಹಿಸಿದ ಘಟನೆ ಕೂಡ ನಡೆದಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಬಹಿಷ್ಕಾರದಿಂದ ಜೀವನೋಪಾಯ, ಸಂಬಂಧಗಳು ಮತ್ತು ಸಾಮಾಜಿಕ ಹಕ್ಕುಗಳು ಹಾನಿಗೊಳಗಾಗಿವೆ ಎಂದು ಕುಟುಂಬಗಳು ಆರೋಪಿಸಿದ್ದು, ಪೊಲೀಸ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಳಲು ತೋಡಿಕೊಂಡಿವೆ.



