ಗದಗ: ವ್ಯಸನಮುಕ್ತ ಸಮಾಜ ನಿರ್ಮಾಣ ಉದ್ದೇಶದಿಂದ ಪಾದಯಾತ್ರೆ ಮೂಲಕ ಜಾಗೃತಿ ಮೂಡಿಸುತ್ತಿರುವ ತೋಂಟದಾರ್ಯ ಜಾತ್ರೆಯ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದು ಮಾಜಿ ಶಾಸಕರಾದ ಡಿ.ಆರ್ ಪಾಟೀಲ ನುಡಿದರು.
ಅವರು ಇಲ್ಲಿನ ವಾರ್ಡ್ ನಂ.35 ರಲ್ಲಿ ದಿ.08 ರಂದು ಮಂಗಳವಾರ ಇತಿಹಾಸ ಪ್ರಸಿದ್ಧ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ವ್ಯಸನಮುಕ್ತ ಸಮಾಜದ ಜಾಗೃತಿಗಾಗಿ ಮೂರನೇ ದಿನದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿ,
ಮಾದಕ ವ್ಯಸನಗಳಿಂದ ಯುವ ಜನಾಂಗ ಮುಕ್ತರಾಗುವುದು ಅನಿವಾರ್ಯವಾಗಿದ್ದು, ರಾಷ್ಟ್ರನಿರ್ಮಾಣ ಪ್ರಕ್ರಿಯೆಯಲ್ಲಿ ತಮ್ಮ ಪಾತ್ರ ಏನೆಂದು ಯುವಕರು ಅರಿಯಬೇಕಿದೆ. ಆಧುನಿಕ ದಿನಗಳಲ್ಲಿ ಜನರನ್ನು ವ್ಯಸನದೆಡೆಗೆ ಆಕರ್ಷಿಸುವ ಅನೇಕ ಮೂಲಗಳು ಹುಟ್ಟಿಕೊಂಡಿದ್ದು, ಇವುಗಳಿಂದ ಎಚ್ಚರವಾಗಿರಬೇಕು ಎಂದು ಕಿವಿಮಾತು ಹೇಳಿದರು.
ಶಿರಗುಪ್ಪಿಯ ಬಸವಾಶ್ರಮದ ಬಸವರಾದ ವೆಂಕಟಾಪೂರ ಶರಣರು ಮಾತನಾಡಿ, ನನ್ನ ಯೌವ್ವನದ ದಿನಗಳಲ್ಲಿ ಗದುಗಿನಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿರುವಾಗ ಹಲವು ದುಶ್ಚಟಗಳಿಗೆ ದಾಸನಾಗಿ ನನ್ನ ಬದುಕನ್ನು ಹಾಳುಮಾಡಿಕೊಂಡಿದ್ದೆ, ಆದರೆ ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳು ನನ್ನನ್ನು ಶ್ರೀಮಠಕ್ಕೆ ಕರೆತಂದು ಬಸವಾದಿ ಶರಣರ ಸಾಹಿತ್ಯವನ್ನು ನನಗೆ ಪರಿಚಯಿಸಿ ಕತ್ತಲೆಯಿಂದ ನನ್ನನ್ನು ಬೆಳಕಿಗೆ ಕರೆತಂದರು. ವ್ಯಸನಗಳು ನಮ್ಮ ಬದುಕನ್ನು ನಿರರ್ಥಕಗೊಳಿಸುತ್ತವೆ ಆದ್ದರಿಂದ ಯುವಕರು ವ್ಯಸನಿಗಳಾಗಬಾರದು ಎಂದರು.
ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ಬಾಪೂಜಿ ನಗರದಿಂದ ರಾಮನಗರದ ವರೆಗೆ ಪಾದಯಾತ್ರೆಯಲ್ಲಿ ನೂರಾರು ಜನರು ಶ್ರೀಗಳೊಂದಿಗೆ ಹೆಜ್ಜೆ ಹಾಕಿದರು. ಈ ವೇಳೆ ಸಾರ್ವಜನಿಕರು ತಮ್ಮ ದುಶ್ಚಟಗಳನ್ನು ತ್ಯಜಿಸುವ ಸಂಕೇತವಾಗಿ ಮಾದಕ ದ್ರವ್ಯಗಳನ್ನು ಶ್ರೀಗಳ ದೇಣಿಗೆಗೆ ಹಾಕಿದರು.
ನಂದಿವೇರಿ ಮಠದ ಶಿವಕುಮಾರ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು.
ತೋಂಟದಾರ್ಯ ಮಠದ ಆಡಳಿತಾಧಿಕಾರಿಗಳಾದ ಎಸ್.ಎಸ್ ಪಟ್ಟಣಶೆಟ್ಟರ, ಜಾತ್ರಾ ಸಮಿತಿ ಅಧ್ಯಕ್ಷರಾದ ಡಾ.ಧನೇಶ ದೇಸಾಯಿ, ಪ್ರಕಾಶ ಬೊಮ್ಮನಹಳ್ಳಿ, ಆಂಜನೇಯ ಕಟಗಿ, ರುದ್ರೇಶ ವಿಭೂತಿ, ಅನಿಲ ಗರಗ ಹಾಗೂ ತೋಂಟದಾರ್ಯ ಜಾತ್ರಾ ಸಮಿತಿಯ ಪದಾಧಿಕಾರಿಗಳು ಹಾಗೂ ಶ್ರೀಮಠದ ಸದ್ಭಕ್ತರು ಹಾಜರಿದ್ದರು.