ವಿಜಯಸಾಕ್ಷಿ ಸುದ್ದಿ, ಮುಂಡರಗಿ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಸ್ವಾರ್ಥ ಸೇವೆ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಕಡು ಬಡವರ ಹಿತ ಕಾಯುವ ಉದ್ದೇಶದೊಂದಿಗೆ ಸೇವೆ ಸಲ್ಲಿಸುತ್ತಿರುವ ಅತ್ತಿಕಟ್ಟಿ ಗ್ರಾಮದ ಹಿರಿಯ ನೇತಾರ ಹಾಗೂ ಸಮಾಜ ಸೇವಕರಾದ ರಾಮಣ್ಣ ಮೇಗಲಮನಿ ಅವರಿಗೆ ತಾಲೂಕಾಡಳಿತದ ವತಿಯಿಂದ 77ನೇ ಗಣರಾಜ್ಯೋತ್ಸವದ ಅಂಗವಾಗಿ ಸಮಾಜಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸೋಮಪ್ಪ–ಫಕೀರವ್ವ ದಂಪತಿಗಳ ಪುತ್ರ ರಾಮಣ್ಣ ಮೇಗಲಮನಿ ಅತ್ತಿಕಟ್ಟಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಡೋಣಿ ಗ್ರಾಮದಲ್ಲಿ 7ನೇ ತರಗತಿ, ಹಳ್ಳಿಕೇರಿಯಲ್ಲಿ 8 ಮತ್ತು 9ನೇ ತರಗತಿ ಹಾಗೂ ಗದಗ ಬಸವೇಶ್ವರ ಶಾಲೆಯಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಪೂರೈಸಿದರು. 30ನೇ ವಯಸ್ಸಿನಲ್ಲಿ 10ನೇ ತರಗತಿ ಪೂರ್ಣಗೊಳಿಸಿ, ಪಿಯುಸಿ ನಂತರ 35ನೇ ವಯಸ್ಸಿನಲ್ಲಿ ಗದಗ ನಗರದ ಕೆಎಸ್ಎಸ್ ಕಾಲೇಜಿನಲ್ಲಿ ಬಿ.ಎ. ಪದವಿ ಆರಂಭಿಸಿದರು. 50ನೇ ವಯಸ್ಸಿನಲ್ಲಿ ಉಳಿದ ವಿಷಯಗಳನ್ನು ಬರೆದು ಬಿ.ಎ. ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಜೀವನಪೂರ್ತಿ ಕಲಿಕೆಯ ಪ್ರೇರಣೆಯಾಗಿ ಹೊರಹೊಮ್ಮಿದ್ದಾರೆ.
ರಾಜಕೀಯ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದು, 2005ರಲ್ಲಿ ಅತ್ತಿಕಟ್ಟಿ ಗ್ರಾ.ಪಂ ಸದಸ್ಯರಾಗಿ, 2018ರಲ್ಲಿ ಎಸ್ಡಿಎಂಸಿ ಸದಸ್ಯರಾಗಿ, ಎಪಿಎಂಸಿ ಸದಸ್ಯರಾಗಿ ಹಾಗೂ ಮುಂಡರಗಿ ತಾಲೂಕು ಪಂಚ ಗ್ಯಾರಂಟಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ದುರ್ಗಾದೇವಿ ಸಮಿತಿಯ ಅಧ್ಯಕ್ಷರಾಗಿ ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಕದಾಂಪುರ ಕ್ಲಸ್ಟರ್ ವ್ಯಾಪ್ತಿಯ 10 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಪ್ರತಿ ಶಾಲೆಗೆ 20 ಸಾವಿರ ರೂ.ಗಳಂತೆ ಒಟ್ಟು 2 ಲಕ್ಷ ರೂ. ದೇಣಿಗೆ ನೀಡಿದ್ದು, ಅತ್ತಿಕಟ್ಟಿ ಗ್ರಾಮದ ಶಾಲೆಗೆ 1,10,000 ರೂ. ದೇಣಿಗೆ ನೀಡಿದ್ದಾರೆ. ಈ ಮೊತ್ತವನ್ನು ಬ್ಯಾಂಕ್ ಡಿಪಾಸಿಟ್ ಮಾಡಿ ಅದರ ಬಡ್ಡಿ ಹಣವನ್ನು ಪ್ರತಿವರ್ಷ ಉತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಬಹುಮಾನವಾಗಿ ನೀಡುವ ವ್ಯವಸ್ಥೆ ಮಾಡಿರುವುದು ಅವರ ಸೇವೆಯ ವಿಶೇಷತೆಯಾಗಿದೆ.
ಮುಂಡರಗಿ ನಗರದ ಕ್ರೀಡಾಂಗಣದಲ್ಲಿ 80 ಸಾವಿರ ರೂ. ವೆಚ್ಚದಲ್ಲಿ ದ್ವಜಸ್ತಂಭ ನಿರ್ಮಾಣ, 1 ಲಕ್ಷ ರೂ. ಕನಕಭವನ ನಿರ್ಮಾಣಕ್ಕೆ ಸಹಾಯ, ಡಂಬಳ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಗೆ 50 ಸಾವಿರ ರೂ. ದೇಣಿಗೆ, ಶಾಲಾ ಪರಿಕರ ವಿತರಣೆ ಹಾಗೂ ಕಡುಬಡವರಿಗೆ ಆರ್ಥಿಕ ನೆರವು ನೀಡುತ್ತಾ ಬರುತ್ತಿದ್ದಾರೆ.
ಈ ಸೇವೆಗಾಗಿ ಅವರಿಗೆ ತಾಲೂಕು ಸಮಾಜಸೇವಾ ಪ್ರಶಸ್ತಿ, ಉತ್ತಮ ಎಸ್ಡಿಎಂಸಿ ಅಧ್ಯಕ್ಷ ಪ್ರಶಸ್ತಿ ಸೇರಿದಂತೆ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಹಲವಾರು ಗೌರವಗಳು ಸಂದಿವೆ. ಅವರ ನಿರಂತರ ಜನಸೇವೆಗೆ ಗ್ರಾಮಸ್ಥರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಮಕ್ಕಳ ಶಿಕ್ಷಣವೇ ಸಮಾಜದ ಭವಿಷ್ಯ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಉತ್ತಮ ಅವಕಾಶಗಳು ದೊರಕಬೇಕು ಎಂಬ ಉದ್ದೇಶದಿಂದ ಈ ಸಹಾಯ ಮಾಡಲಾಗಿದೆ. ಮುಂದೆಯೂ ಶಿಕ್ಷಣ ಕ್ಷೇತ್ರಕ್ಕೆ ನನ್ನ ಸಹಕಾರ ನಿರಂತರವಾಗಿರುತ್ತದೆ”
-
ರಾಮಣ್ಣ ಮೇಗಲಮನಿ.
ಸಮಾಜಸೇವಾ ಪ್ರಶಸ್ತಿ ಪುರಸ್ಕೃತರು.
“ರಾಮಣ್ಣ ಮೇಗಲಮನಿ ಅವರು 10 ಶಾಲೆಗಳಿಗೆ 20 ಸಾವಿರ ರೂ. ಹಾಗೂ ಅತ್ತಿಕಟ್ಟಿ ಗ್ರಾಮದ ಶಾಲೆಗೆ 1.10 ಲಕ್ಷ ರೂ. ನೆರವು ನೀಡುವ ಮೂಲಕ ತಾಲೂಕಿನ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಮತ್ತು ಪ್ರತಿಭಾ ಪ್ರೋತ್ಸಾಹಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ”
-
ಗಂಗಾಧರ ಅಣ್ಣಿಗೇರಿ.
ಕ್ಷೇತ್ರ ಶಿಕ್ಷಣಾಧಿಕಾರಿ, ಮುಂಡರಗಿ.



