ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಸೂರಣಗಿ ಗ್ರಾಮದ ನವಚೇತನ ಯುವಕ ಮಂಡಳದವರು ಕಳೆದ 20 ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವವನ್ನು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸುತ್ತಿದ್ದು, ಪ್ರಸ್ತುತ 21ನೇ ವರ್ಷದ ಗಣೇಶೋತ್ಸವದ ನಿಮಿತ್ತ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಗಜಾನನೋತ್ಸವದ ಅಂಗವಾಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸೆ.2ರ ಮುಂಜಾನೆ 10 ಗಂಟೆಯಿಂದ ಗದಗ ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸೂರಣಗಿ ಗ್ರಾಮದ ಎಲ್ಲ ಸಂಘ-ಸಂಸ್ಥೆಗಳ ಸಹಯೋಗದಲ್ಲಿ 9ನೇ ವರ್ಷದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದು, ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಂಘಟಕರು ವಿನಂತಿಸಿದ್ದಾರೆ.
ಸೂರಣಗಿ ಗ್ರಾಮದಲ್ಲಿ ಎರಡು ದಶಕಗಳ ಹಿಂದೆ 9 ಮಂದಿ ಉತ್ಸಾಹಿ ಯುವಕರು ಸೇರಿ ಪ್ರಾರಂಭಿಸಿದ ಶ್ರೀ ನವಚೇತನ ಯುವಕ ಸಂಘ ಇಂದು ಸುಮಾರು 130 ಯುವಕರ ಶಕ್ತಿ ಕೇಂದ್ರವಾಗಿ ಜಿಲ್ಲೆಯಲ್ಲಿಯೇ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.