ರಸಗೊಬ್ಬರಕ್ಕಾಗಿ ಸೊಸೈಟಿ ಅಧಿಕಾರಿಗಳಿಗೇ ದಿಗ್ಬಂಧನ!

0
Spread the love

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ತಾಲೂಕಿನ ವಿವಿಧೆಡೆ ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಮುಗಿಬಿದ್ದು ಗದ್ದಲ, ಗಲಾಟೆ ನಡೆಸಿದ್ದು, ಹಲುವಾಗಲು ಗ್ರಾಮದಲ್ಲಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಚೇರಿಗೆ ಬೀಗ ಜಡಿದು, ಅಧಿಕಾರಿಗಳಿಗೆ ದಿಗ್ಬಂಧನ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆದಿದೆ.

Advertisement

ಕಳೆದ ವಾರದಿಂದ ತಾಲೂಕಿನಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ಬೆಳವಣಿಗೆ ಹಂತದಲ್ಲಿ ಇರುವುದರಿಂದ ಯೂರಿಯಾ ಗೊಬ್ಬರಕ್ಕೆ ಸಾಕಷ್ಟು ಬೇಡಿಕೆ ಉಂಟಾಗಿದೆ. ಆದರೆ ಅಗತ್ಯ ಯೂರಿಯಾ ರಸಗೊಬ್ಬರ ಸಿಗದ ಪರಿಣಾಮ ಬುಧವಾರ ಬೆಳಿಗ್ಗೆಯಿಂದಲೇ ರೈತರು ಸೊಸೈಟಿಗಳ ಮುಂದೆ ಜಮಾಯಿಸಿ ಗೊಬ್ಬರ ನೀಡುವಂತೆ ಆಗ್ರಹಿಸಿದ್ದಾರೆ.

ಹಲುವಾಗಲು ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಚೇರಿಗೆ ಮುತ್ತಿಗೆ ಹಾಕಿದ ರೈತರು, ಅಲ್ಲಿದ್ದ ಸೊಸೈಟಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಕೂಡಿ ಹಾಕಿ ಬಾಗಿಲಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸೊಸೈಟಿ ನಿರ್ದೇಶಕ ಎಸ್.ಪಿ. ಲಿಂಬ್ಯಾನಾಯ್ಕ, ಕಳೆದ 1 ತಿಂಗಳಿನಿಂದ ಗೊಬ್ಬರಕ್ಕಾಗಿ ಆಗ್ರಹಿಸುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಖಾಸಗಿ ಅಂಗಡಿಯವರು ಹೆಚ್ಚಿನ ಬೆಲೆಗೆ ಯೂರಿಯಾ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ, ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಹಾಯಕ ಕೃಷಿ ನಿರ್ದೆಶಕ ವಿ.ಸಿ. ಉಮೇಶ, 600 ಚೀಲ ಗೊಬ್ಬರ ಬಳ್ಳಾರಿಯಿಂದ ಬರುತ್ತಿದ್ದು, ಕಾಯಿರಿ ಎಂದು ರೈತರಿಗೆ ಸಮಾಧಾನ ಹೇಳಿದರೂ ರೈತರು ಸುಮ್ಮನಾಗಲಿಲ್ಲ. ಅಂತಿಮವಾಗಿ ಹೊಸಪೇಟೆಯ ಜಂಟಿ ಕೃಷಿ ನಿರ್ದೆಶಕ ಎಸ್.ಮಂಜುನಾಥ ಆಗಮಿಸಿ ಇಂದು ರಾತ್ರಿ 32 ಟನ್ ಯೂರಿಯಾ ಗೊಬ್ಬರ ಬಳ್ಳಾರಿಯಿಂದ ಬರಲಿದೆ ಎಂದು ಹೇಳಿದರು. ಹರಪನಹಳ್ಳಿ ಪಟ್ಟಣದಲ್ಲಿ ಮದ್ಯಾಹ್ನದ ಸಮಯದಲ್ಲಿ ಬಂದ ಗೊಬ್ಬರವನ್ನು ಪೋಲೀಸರ ನೆರವಿನೊಂದಿಗೆ ರೈತರಿಗೆ ವಿತರಣೆ ಮಾಡಲಾಯಿತು.


Spread the love

LEAVE A REPLY

Please enter your comment!
Please enter your name here