ವಿಜಯಸಾಕ್ಷಿ ಸುದ್ದಿ, ಗದಗ: ಮನುಕುಲಕ್ಕಾಗಿ ಸೇವೆ ಮಾಡಿದವರನ್ನು ಸಮಾಜ ಎಂದೂ ಮರೆಯದು. ನರ್ಸಿಂಗ್ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಜನಸಮುದಾಯದ ಆರೋಗ್ಯವನ್ನು ಸುಧಾರಿಸುವಲ್ಲಿ ಕಂಕಣಬದ್ಧರಾಗಿ ಸೇವೆ ಮಾಡಲಿ ಎಂದು ರಾಜ್ಯದ ಕಾನೂನು ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಪ್ರವಾಸೋದ್ಯಮ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕರೆ ನೀಡಿದರು.
ಅವರು ಬೆಟಗೇರಿಯ ಬಾಸೆಲ್ ಮಿಶನ್ ಸಿಎಸ್‌ಐ ಆಸ್ಪತ್ರೆಯ ಕಾಲೇಜ್ ಆಫ್ ನರ್ಸಿಂಗ್‌ನ ಬೇಸಿಕ್ ಬಿಎಸ್ಸಿ ನರ್ಸಿಂಗ್ ಶಿಕ್ಷಣ ಪಡೆಯುತ್ತಿರುವ ಮೊದಲ ವರ್ಷದ ಬ್ಯಾಚ್ ವಿದ್ಯಾರ್ಥಿಗಳ ದೀಪ ಬೆಳಗಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೋಗಿಗಳ ಸೇವೆಗೆ ಮದರ್ ಥೆರೆಸಾ ಬಹು ದೊಡ್ಡ ಹೆಸರು ಪಡೆದವರಾಗಿದ್ದು, ಅವರ ಸೇವೆ ಅನುಪಮ. ಅನುಕಂಪದ ಸೇವೆಯನ್ನು ರೋಗಿಗೆ ನೀಡುವದು ಜೀವನದುದ್ದಕ್ಕೂ ಸಮಾಧಾನ ನೀಡುತ್ತದೆ ಎಂದು ಬಣ್ಣಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಲ್ಸನ್ ಮೈಲಿ ಮಾತನಾಡಿ, ಸೇವೆ ಮಾಡಿಸಿಕೊಳ್ಳುವ ಮನೋಭಾವ ಬದಲಾಗಿ ಸೇವೆ ಮಾಡುವ ಮನೋಭಾವ ಹೆಚ್ಚಾಗಬೇಕು. ವೇತನಕ್ಕಾಗಿ ವೃತ್ತಿ ಮಾಡುವುದಲ್ಲ ರೋಗಿಯ ಸೇವೆ ಮಾಡಿ ಧನ್ಯತಾಭಾವ ಹೊಂದಿ ಅದರಿಂದ ನಿಮ್ಮ ಭವಿಷ್ಯ ಉಜ್ವಲವಾಗುವದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವೇದಿಕೆಯ ಮೇಲೆ ಸಿಎಸ್‌ಐ ಆಸ್ಪತ್ರೆಯ ಮೆಡಿಕಲ್ ಸುಪರಿಟೆಂಡೆಂಟ್ ಡಾ.ಅಜೇಯ್ ರಾಜು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿ, ಸಿ.ಎಸ್.ಐ ಆಸ್ಪತ್ರೆಯ ವ್ಯವಸ್ಥಾಪಕ ಎಸ್.ಎಚ್. ಉಳ್ಳಾಗಡ್ಡಿ, ಪ್ರಾಂಶುಪಾಲರಾದ ಬ್ಯೂಲಾ ಪ್ರಿಯದರ್ಶಿನಿ ಉಪಸ್ಥಿತರಿದ್ದರು.
ಕಾಲೇಜಿನ ಗುರುಬಳಗದಿಂದ ಸ್ವಾಗತಗೀತೆ ಜರುಗಿತು. ರೆವರೆಂಡ್ ರೆಜಿನಾಲ್ಡಪಾಲ್ ಅವರಿಂದ ಪ್ರಾರ್ಥನೆ ಜರುಗಿತು. ಮಾರ್ಲಿನ್ ಸ್ವಾಗತಿಸಿದರು. ಪ್ರಾಂಶುಪಾಲರಾದ ಬ್ಯೂಲಾ ಪ್ರಿಯದರ್ಶಿನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹನಾ ಪರಿಚಯಿಸಿದರು, ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಂದ ಸಮರ್ಪಣಾ ಗೀತೆ ಜರುಗಿತು. ಪುಷ್ಪಾ ಕಂಬಳಿ ಬೈಬಲ್ ಪಠಿಸಿದರೆ, . ರೆವರೆಂಡ್ ರೆಜಿನಾಲ್ಡಪಾಲ್ ಸಂದೇಶ ವಾಚಿಸಿದರು. ಸ್ಟೇಫಿ ವಂದಿಸಿದರು. ರೆವರೆಂಡ್ ಜಾನ್ ದೊಡ್ಡಮನಿ ಅವರಿಂದ ಮುಕ್ತಾಯ ಪ್ರಾರ್ಥನೆ ಜರುಗಿತು.
ಬೆಟಗೇರಿಯ ಸಿ.ಎಸ್.ಐ ಆಸ್ಪತ್ರೆ ಗದಗ ಪರಿಸರದ ವೈದ್ಯಕೀಯ ಕ್ಷೇತ್ರದಲ್ಲಿ ಬಹು ದೊಡ್ಡ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿಎಸ್‌ಐ ಆಸ್ಪತ್ರೆಯ ಕಾಲೇಜ್ ಆಫ್ ನರ್ಸಿಂಗ್‌ನ ಬೇಸಿಕ್ ಬಿಎಸ್ಸಿ ನರ್ಸಿಂಗ್ ಶಿಕ್ಷಣ ನೀಡುತ್ತಿರುವದು ವಿದ್ಯಾರ್ಥಿಗಳಿಗೆ ಪಾಠ ಮತ್ತು ಪ್ರಯೋಗಳು ಲಭ್ಯವಾಗುತ್ತಿರುವದು ವಿದ್ಯಾರ್ಥಿಗಳ ಜ್ಞಾನ ವಿಕಸನಕ್ಕೆ ಹೆಚ್ಚು ಪೂರಕವಾಗಿದೆ. ಇಲ್ಲಿ ಶಿಕ್ಷಣ ಪಡೆದವರು ಸಂಬಳಕ್ಕಿಂತ ಸೇವಾ ಮನೋಭಾವದೊಂದಿಗೆ ಕಾರ್ಯ ಮಾಡಿ ಸಂತೃಪ್ತಭಾವನೆ ಹೊಂದಲಿ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.