ವಿಜಯಸಾಕ್ಷಿ ಸುದ್ದಿ, ರೋಣ: ರೈತರು ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಕೆ ಮಾಡಿಕೊಂಡು ಅದರಿಂದ ಗೊಬ್ಬರ ತಯಾರಿಸಿ ಗುಣಮಟ್ಟದ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದು ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಬಾಸಲಾಪೂರ ಗ್ರಾಮದ ಬಳಿ ಶಿವಯೋಗಿ ನಡುವಿನಮನಿ ಇವರ ಜಮೀನಿನಲ್ಲಿ ಹಿಂಗಾರು ಹಂಗಾಮಿನ ಕಡಲೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈಗಿನ ಕಾಲಘಟ್ಟದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುವುದು ಹೆಚ್ಚಾಗಿದ್ದು, ಇದು ಸಮಂಜಸವಲ್ಲ. ಬದಲಾಗಿ ರೈತರು ಸಾವಯವ ಗೊಬ್ಬರ ಬಳಕೆಯತ್ತ ಮುಖ ಮಾಡಬೇಕು. ಮನೆಗಳಲ್ಲಿ ಜಾನುವಾರುಗಳ ಸಾಕಾಣಿಕೆ ಮಾಡಬೇಕು. ಇದರಿಂದ ಕುಟುಂಬ ನಿರ್ವಹಣೆ ಜೊತೆಗೆ ಜಮೀನುಗಳಿಗೆ ಗೊಬ್ಬರ ಸಹ ಸಿಗುತ್ತದೆ. ಅಲ್ಲದೆ ಬೇವಿನ ಮರದ ಎಲೆಗಳಿಂದ ಕ್ರಿಮಿನಾಶಕ ಔಷಧಿಗಳನ್ನು ತಯಾರಿಸಬಹುದು. ಕೃಷಿ ಸಂಪನ್ಮೂಲ ವ್ಯಕ್ತಿಗಳು ತಿಳಿಸಿದ ಹಾಗೆ ಪತ್ರಿ ಕಾಯಿಗಳಿಂದ ಗೊಬ್ಬರ ತಯಾರಿಸಿ ಬೆಳೆಗಳಿಗೆ ಸಿಂಪರಣೆ ಮಾಡಬಹುದು. ಸಾವಯವ ಗೊಬ್ಬರ ಬಳಕೆಯಿಂದ ಬೆಳೆಗಳಿಗೆ ತಗಲುವ ಅನೇಕ ರೋಗಗಳನ್ನು ತಡೆಗಟ್ಟಬಹುದು ಎಂದರು.
ಕೃಷಿ ಸಂಪನ್ಮೂಲ ವ್ಯಕ್ತಿ ಸುರೇಶಗೌಡ ಪಾಟೀಲ ಮಾತನಾಡಿ, ರೈತರು ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುತ್ತಿರುವುದು ಭೂಮಿಗೆ ವಿಷ ಹಾಕಿದಂತೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ರುಚಿಕಟ್ಟಾದ ಧಾನ್ಯಗಳನ್ನು ಬೆಳೆಯಲು ಅಸಾಧ್ಯ. ಅಲ್ಲದೆ ಭೂಮಿಯ ಸತ್ವ ಕೂಡ ಬರಡಾಗುತ್ತದೆ. ಇದರಿಂದ ಮನುಷ್ಯನಿಗೂ ಅನೇಕ ರೋಗಗಳು ತಗಲಬಹುದು ಎಂದು ಎಚ್ಚರಿಸಿದ ಅವರು, ಸಾವಯವ ಗೊಬ್ಬರದತ್ತ ರೈತರು ಮುಖ ಮಾಡಬೇಕು ಎಂದರು.
ರಾಸಾಯನಿಕ ಗೊಬ್ಬರ ಬಳಕೆ ಮಾಡಿ ಬೆಳೆಯುವ ಬೆಳೆಗಳು ಬಾಳಿಕೆ ಬರುವುದಿಲ್ಲ. ಜೊತೆಗೆ ಮಾರುಕಟ್ಟೆಯಲ್ಲಿ ಬೆಲೆಯೂ ಸಿಗುವುದಿಲ್ಲ ಎಂಬ ಸತ್ಯವನ್ನು ಮೊದಲು ರೈತರು ತಿಳಿಯುವುದು ಅವಶ್ಯಕವಾಗಿದೆ. ಉತ್ತಮ ಮತ್ತು ಪೌಷ್ಠಿಕತೆಯಿರುವ ಬೆಳೆಗಳು ಬರಲು ಸಾವಯವ ಗೊಬ್ಬರದಿಂದ ಮಾತ್ರ ಸಾಧ್ಯ. ಹೀಗಾಗಿ, ತಮ್ಮ ಜಮೀನುಗಳಲ್ಲಿಯೇ ಸಿಗುವ ಕಸ ಕಡ್ಡಿಗಳಿಂದ ಗೊಬ್ಬರ ತಯಾರಿಸಿ ಬೆಳೆಗಳಿಗೆ ನೀಡಬಹುದು. ಅಗತ್ಯ ಮಾಹಿತಿ ಬೇಕಿದ್ದಲ್ಲಿ ಹುಲಕೋಟಿ ಗ್ರಾಮದಲ್ಲಿರುವ ನಮ್ಮ ಜಮೀನುಗಳನ್ನು ನೋಡಬಹುದು ಎಂದರು.
ಇದೇ ಸಂದರ್ಭದಲ್ಲಿ ಜಮೀನಿನ ಮಾಲಕರಾದ ಶಿವಯೋಗಿ ನಡುವಿನಮನಿ ಸೇರಿದಂತೆ ಕೃಷಿಕ ಸಮಾಜದ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಅಂದಪ್ಪ ಗಡಗಿ, ಮೇಘರಾಜ ಭಾವಿ, ಎಸ್.ಎಫ್. ತಹಸೀಲ್ದಾರ, ಪ್ರಮೋದ ಕುಲಕರ್ಣಿ ಸೇರಿದಂತೆ ಕೃಷಿಕ ಸಮಾಜದ ಪ್ರತಿನಿಧಿಗಳು ಮತ್ತು ರೈತರು ಉಪಸ್ಥಿತರಿದ್ದರು.
ರೈತರು ತಮ್ಮ ಜಮೀನುಗಳಲ್ಲಿನ ಮಣ್ಣು ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಕಾರಣ ಯಾವ ಮಣ್ಣಿನಲ್ಲಿ ಎಷ್ಟು ಸತ್ವಯುತ ಅಂಶಗಳಿವೆ ಎನ್ನುವುದು ಮಣ್ಣು ಪರೀಕ್ಷೆಯಿಂದ ತಿಳಿಯುತ್ತದೆ ಹಾಗೂ ಈ ಮಣ್ಣಿನಲ್ಲಿ ಯಾವ ಬೆಳೆಯನ್ನು ಬೆಳೆಯಬಹುದು ಎಂಬ ನಿಖರತೆಯನ್ನು ತಿಳಿಯಲು ಸಹಾಯವಾಗುತ್ತದೆ. ಇದರಿಂದ ರೈತರಿಗೂ ಲಾಭವಾಗಲಿದೆ. ಮುಖ್ಯವಾಗಿ ಮಹಿಳೆಯರು ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಬೇಕು. ಕುಟುಂಬಕ್ಕೆ ಬೇಕಾದ ವಸ್ತುಗಳನ್ನು ಜಮೀನುಗಳಲ್ಲಿ ಬೆಳೆಯುವ ಆಸಕ್ತಿಯನ್ನು ಇಟ್ಟುಕೊಳ್ಳಬೇಕು ಎಂದು ಚೇತನಾ ಪಾಟೀಲ ತಿಳಿಸಿದರು.



