ಸೇನೆಯಲ್ಲಿ ಕರ್ತವ್ಯದಲ್ಲಿದ್ದಾಗಲೇ ವಿದ್ಯುತ್ ಅವಘಡದಿಂದ ಮೃತಪಟ್ಟು ಯೋಧ: ಕಂಬನಿ ಮಿಡಿದ ಗ್ರಾಮಸ್ಥರು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದಾಗಲೇ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದ ತಾಲೂಕಿನ ಹಿರೇಕೊಪ್ಪ ಗ್ರಾಮದ ಯೋಧ ಮಂಜುನಾಥ ಮಲ್ಲಪ್ಪ ಗಿಡ್ಡಮಲ್ಲಣ್ಣವರ (35) ಅವರ ಅಂತ್ಯಸಂಸ್ಕಾರವನ್ನು ಗುರುವಾರ ಅವರ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

Advertisement

ಯೋಧನ ಪಾರ್ಥಿವ ಶರೀರ ಹಿರೇಕೊಪ್ಪ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಂಜುನಾಥ ಅವರು ಕಳೆದ 13 ವರ್ಷಗಳಿಂದ ಭಾರತೀಯ ಸೇನೆಯ ಪಂಜಾಬ್ ರಾಜ್ಯದ ಜಲಂಧರ್‌ನಲ್ಲಿರುವ ಎಎಸ್‌ಸಿ ಸೆಂಟರ್‌ನಲ್ಲಿ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ತಮ್ಮ ಕುಟುಂಬದೊಂದಿಗೆ ಸೇನಾ ವಸತಿ ಗೃಹದಲ್ಲಿ ವಾಸವಾಗಿದ್ದರು.

ಈಚೆಗೆ ಕರ್ತವ್ಯದ ಸಮಯದಲ್ಲಿ ಸಂಭವಿಸಿದ ವಿದ್ಯುತ್ ಅವಘಡದಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ನಿಧನರಾಗಿದ್ದರು.

ಗುರುವಾರ ಯೋಧನ ಪಾರ್ಥಿವ ಶರೀರವನ್ನು ವಿಶೇಷ ವಾಹನದಲ್ಲಿ ಹಿರೇಕೊಪ್ಪ ಗ್ರಾಮಕ್ಕೆ ತರಲಾಯಿತು. ಯೋಧನ ಅಂತಿಮ ದರ್ಶನಕ್ಕೆ ನೂರಾರು ಜನರು ಸೇರಿದ್ದರು. ನರಗುಂದ ಶಾಸಕ ಸಿ.ಸಿ. ಪಾಟೀಲ್, ಸಂಸದ ಪಿ.ಸಿ. ಗದ್ದಿಗೌಡರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಯೋಧನಿಗೆ ಅಂತಿಮ ನಮನ ಸಲ್ಲಿಸಿ ಗೌರವ ಅರ್ಪಿಸಿದರು. ಯೋಧನ ಪತ್ನಿ ಮತ್ತು ಐದು ವರ್ಷದ ಪುತ್ರನ ನೋವು ಮನ ಕಲಕುವಂತಿತ್ತು.

ಮೃತ ಯೋಧ ಮಂಜುನಾಥ ಅವರು ಪತ್ನಿ, ಪುತ್ರ, ತಂದೆ-ತಾಯಿ ಮತ್ತು ಸಹೋದರ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಯೋಧನ ಅಕಾಲಿಕ ನಿಧನಕ್ಕೆ ಇಡೀ ಗ್ರಾಮವೇ ಶೋಕದಲ್ಲಿ ಮುಳುಗಿತ್ತು.

ಯೋಧನ ಪಾರ್ಥಿವ ಶರೀರ ಹುಬ್ಬಳ್ಳಿ ಮೂಲಕ ಗದಗ ನಗರಕ್ಕೆ ಆಗಮಿಸುತ್ತಿದ್ದಂತೆ ಮಂಜುನಾಥ ಅವರ ಸ್ನೇಹಿತರು, ಅಭಿಮಾನಿಗಳು ಮತ್ತು ಗ್ರಾಮಸ್ಥರು ಬೈಕ್ ರ‍್ಯಾಲಿ ಮೂಲಕ ಹುಟ್ಟೂರು ಹಿರೇಕೊಪ್ಪಕ್ಕೆ ಕರೆದೊಯ್ದರು. ಮಂಜುನಾಥ ಅವರು ಶಿಕ್ಷಣ ಪಡೆದ ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳೂ ಅಂತಿಮ ನಮನ ಸಲ್ಲಿಸಿದರು.

 


Spread the love

LEAVE A REPLY

Please enter your comment!
Please enter your name here