ರಾಮನಗರ:- ಜಿದ್ದಾಜಿದ್ದಿನ ಚನ್ನಪಟ್ಟಣ ಉಪಚುನಾವಣೆಯ ಮತದಾನ ಮುಗಿದಿದೆ. ಈಗ ಯಾರ್ ಗೆಲ್ತಾರೆ? ಯಾರ್ ಸೋಲ್ತಾರೆ ಅನ್ನೋದಷ್ಟೇ ಬಾಕಿ ಉಳಿದಿದೆ. ಇದರ ನಡುವೆಯೇ ಸಿಪಿ ಯೋಗೇಶ್ವರ್ ಇಂದು ನೀಡಿರುವ ಹೇಳಿಕೆ ಭಾರೀ ಚರ್ಚೆ ಹುಟ್ಟು ಹಾಕಿದೆ. ಅಷ್ಟೇ ಅಲ್ಲದೇ ಫಲಿತಾಂಶಕ್ಕೂ ಮುನ್ನವೇ ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಸೋಲೋಪ್ಪಿಕೊಂಡ್ರಾ ಎಂಬ ಪ್ರಶ್ನೆ ಎದ್ದಿದೆ.
ಇಂದು ಸಿಪಿ ಯೋಗೇಶ್ವರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು,ಯಾರೇ ಗೆದ್ರೂ ಕೂದಲೆಳೆಯ ಅಂತರದಲ್ಲಿ ಫಲಿತಾಂಶ ಬರಬಹುದು. ಬಿಜೆಪಿ, JDS ಕೆಲಸ ಚನ್ನಪಟ್ಟಣದಲ್ಲಿ ಬಹಳಷ್ಟು ವರ್ಕೌಟ್ ಆಗಿದೆ ಎಂದು ಹೇಳುವ ಮೂಲಕ ಸೋಲಿನ ಸುಳಿವು ಕೊಟ್ಟಿದ್ದಾರೆ. ಅಲ್ಲದೇ ಜಮಿರ್ ಅಹಮ್ಮದ್ ಖಾನ್ ಕರಿಯ ಕುಮಾರಸ್ವಾಮಿ ಹೇಳಿಕೆ ಸೋಲಿನ ಕಾರಣವಾಗಬಹುದು ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.
ಯಾರೇ ಗೆದ್ರೂ ಕೂದಲೆಳೆಯ ಅಂತರದಲ್ಲಿ ಫಲಿತಾಂಶ ಬರಬಹುದು. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರಿಗೆ ಕೃತಜ್ಞತೆ ಅರ್ಪಿಸುತ್ತೇನೆ. ಸಿಎಂ, ಡಿಸಿಎಂ, ಸಚಿವರು, ಡಿ.ಕೆ.ಸುರೇಶ್ಗೆ ಧನ್ಯವಾದ ಹೇಳುತ್ತೇನೆ. ಮೊಮ್ಮಗ ಗೆಲ್ಲಲೇಬೇಕೆಂದು ದೇವೇಗೌಡರು ಹೋರಾಡಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಸಮಬಲದ ಹೋರಾಟ ಅಂತಾ ಅನ್ಸುತ್ತೆ. ಕೆಲವರ ಮಾತುಗಳು ಜನರ ಭಾವನೆಗೆ ಘಾಸಿ ಆಗಿದೆ ಅನ್ನಿಸುತ್ತೆ. ಸಚಿವ ಜಮೀರ್ ಮಾತಿನಿಂದ ಮುಸ್ಲಿಮರಿಂದ ಸ್ವಲ್ಪ ಮತ ಬಂದ್ರೂ. ನನಗೆ ಬರಬೇಕಿದ್ದ ಒಕ್ಕಲಿಗ ಮತಗಳು ಬಂದಿಲ್ಲ ಅನ್ನಿಸುತ್ತೆ ಎಂದು ಪರೋಕ್ಷವಾಗಿ ಜಮೀರ್ ಅಹಮ್ಮದ್ ಖಾನ್ ಕುಮಾರಸ್ವಾಮಿ ಬಗ್ಗೆ ಆಡಿದ ಮಾತಿನ ಬಗ್ಗೆ ಅಸಮಾಧಾನ ಹೊರಹಾಕಿದರು.
ಬಿಜೆಪಿ, JDS ಕೆಲಸ ಚನ್ನಪಟ್ಟಣದಲ್ಲಿ ಬಹಳಷ್ಟು ವರ್ಕೌಟ್ ಆಗಿದೆ. ಯಾಕೆ ಅಂದ್ರೆ ನಾವೇ ಇಲ್ಲಿ ಬಿಜೆಪಿ ಕಾರ್ಯಕರ್ತರನ್ನು ಕಟ್ಟಿದ್ದೇವೆ. ಇದುವರೆಗೂ ತೆಗೆದುಕೊಂಡಿರುವ ಗರಿಷ್ಠ ಮತಗಳು 85 ಸಾವಿರ. ಈ ಚುನಾವಣೆ ಗೆಲ್ಲಬೇಕಾದರೆ 1 ಲಕ್ಷ ಮತ ತೆಗೆದುಕೊಳ್ಳಬೇಕು. ಸೋತಿದ್ದೇನೆ ಅಂತಾ ಅಲ್ಲ, ಇಲ್ಲಿ ಸಮಬಲದ ಹೋರಾಟ ಇದೆ. ಒಕ್ಕಲಿಗ ಮತ ಕ್ರೋಢೀಕರಣ ಆಗಿದ್ದರೆ ಫಲಿತಾಂಶ ಮೇಲೆ ಪರಿಣಾಮ ಬೀರಲಿದೆ. ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಆರ್ಭಟ ಜೋರಾಗಿತ್ತು. ಅವರ ಸಮುದಾಯದ ಜನರು ಕ್ಷೇತ್ರದಲ್ಲಿದ್ದು ಕೆಲಸ ಮಾಡಿದರು. ಡಿ.ಕೆ.ಸುರೇಶ್, ಡಿ.ಕೆ.ಶಿವಕುಮಾರ್, ನಾನು ಒಕ್ಕಲಿಗನಾಗಿದ್ರೂ ನಮ್ಮ ಜನ ಇನ್ನೂ ಅವರಿಗೆ ಅಂಟಿಕೊಂಡು ಕೂತಿದ್ದಾರೆ ಎಂದು ಹೇಳಿದರು.
ಈ ಮೂಲಕ ಯೋಗೇಶ್ವರ್ ಅವರ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಪರೋಕ್ಷವಾಗಿ ತಮ್ಮ ಸೋಲಿನ ಸುಳಿವು ಕೊಟ್ಟಂತಿದೆ.