ನವದೆಹಲಿ:- ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿಯವರ ಮೇಲೆ ಕೇಂದ್ರ ಸಚಿವ ಅಮಿತ್ ಶಾ ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದ್ದಾರೆ.
ಇಂದು ರಾಜ್ಯಸಭೆಯಲ್ಲಿ “ಭಾರತದ ಸಂವಿಧಾನದ 75 ವರ್ಷಗಳ ಅದ್ಭುತ ಪಯಣ” ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿಯವರ ಮೇಲೆ ತೀವ್ರ ಆಕ್ರೋಶ ಹೊರ ಹಾಕಿದರು.
ಕಾಂಗ್ರೆಸ್ ಪಕ್ಷವು ತಮ್ಮ ಅಧಿಕಾರಾವಧಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದೆ ಮತ್ತು ಜನರ ಹಕ್ಕುಗಳನ್ನು ದುರ್ಬಲಗೊಳಿಸಿದೆ ಎಂದರು. ಅಧಿಕಾರದ ಅವಧಿಯಲ್ಲಿ ಕಾಂಗ್ರೆಸ್ ತನ್ನ ಹಿತಾಸಕ್ತಿಗಳಿಗೆ ಸರಿಹೊಂದುವಂತೆ ಸಂವಿಧಾನವನ್ನು ತಿದ್ದುಪಡಿ ಮಾಡಿದೆ ಎಂದಿರುವ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಭಾರತೀಯ ಸಂವಿಧಾನದ ಖಾಲಿ ಪ್ರತಿಗಳನ್ನು ಒಯ್ಯುತ್ತಿದ್ದಾರೆ. ಇದು ಜನರಿಗೆ ಮತ್ತು ದೇಶಕ್ಕೆ ಮಾಡಿದ ದೊಡ್ಡ ವಂಚನೆಯಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿ 16 ವರ್ಷಗಳ ಕಾಲ ಆಡಳಿತ ನಡೆಸಿತು. ಈ ಅವಧಿಯಲ್ಲಿ 22 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಿದೆ. ಕಾಂಗ್ರೆಸ್ 55 ವರ್ಷಗಳ ಕಾಲ ಆಡಳಿತ ನಡೆಸಿತು. ಈ ಅವಧಿಯಲ್ಲಿ ಬಿಜೆಪಿ 77 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಸಂವಿಧಾನಕ್ಕೆ ಬದಲಾವಣೆಗಳನ್ನು ಮಾಡಿದೆ. ಆದರೆ ಬದಲಾವಣೆಯ ಉದ್ದೇಶವೇನು? ಎಂಬುದು ಪಕ್ಷಕ್ಕೆ ಸಂವಿಧಾನದ ಮೇಲಿನ ನಂಬಿಕೆಯನ್ನು ತೋರಿಸುತ್ತದೆ ಎಂದಿದ್ದಾರೆ.
ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಕಾಂಗ್ರೆಸ್ ಯಾವತ್ತೂ ಕೆಲಸ ಮಾಡಿಲ್ಲ, ಮೋದಿ ಸರ್ಕಾರ ಅವರ ಉನ್ನತಿಗೆ ಸಹಾಯ ಮಾಡುತ್ತಿದೆ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ 42ನೇ ಸಂವಿಧಾನ ತಿದ್ದುಪಡಿಯ ಮೂಲಕ ಲೋಕಸಭೆ, ವಿಧಾನಸಭೆಗಳ ಅಧಿಕಾರಾವಧಿಯನ್ನು ಹೆಚ್ಚಿಸಿತು ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.