ಬೆಂಗಳೂರು: ಪಂಡಿತ್ ಜವಾಹರಲಾಲ್ ನೆಹರೂ ಅವರ ಒಪ್ಪಿಗೆಗೆ ವಿರುದ್ಧವಾಗಿಯೇ ಐತಿಹಾಸಿಕ ಸೋಮನಾಥ ಮಂದಿರದ ಪುನರ್ ನಿರ್ಮಾಣ ನಡೆದಿತ್ತು ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.
“ಐತಿಹಾಸಿಕ ಸೋಮನಾಥ ಮಂದಿರಕ್ಕೆ 75 ವರ್ಷ” ಪೂರೈಸಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ಪೂಜೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಾರಜೋಳ ಅವರು, ಸೋಮನಾಥ ದೇವಾಲಯವು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಮತ್ತು ಮಹತ್ವದ ದೇವಾಲಯ ಎಂದು ಹೇಳಿದರು.
ಸೋಮನಾಥ ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ 1951ರಲ್ಲಿ ದೇವಾಲಯವನ್ನು ಪುನರ್ ಸ್ಥಾಪಿಸಿ ಲೋಕಾರ್ಪಣೆ ಮಾಡಲಾಗಿದೆ. ಇಂದಿನ ದಿನದಲ್ಲಿ ದೇಶದ 140 ಕೋಟಿ ಜನರು ಸೋಮನಾಥ ದೇವಾಲಯಕ್ಕೆ ಭಕ್ತಿ ಹಾಗೂ ಶ್ರದ್ಧೆಯಿಂದ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಇಂದು ಬಿಜೆಪಿ ಮಾತ್ರವಲ್ಲದೆ, ದೇಶಾದ್ಯಂತ ಹಿಂದೂ ಸಮುದಾಯವು ಸೋಮನಾಥ ಮಂದಿರದ ಪುನರ್ ನಿರ್ಮಾಣದ ಸ್ಮರಣಾರ್ಥವಾಗಿ ತಮ್ಮ ತಮ್ಮ ಊರುಗಳಲ್ಲಿ ಶಿವನ ಪೂಜೆ ನಡೆಸುತ್ತಿದೆ. ಅದೇ ರೀತಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿ ಇಂದು ವಿಶೇಷ ಪೂಜೆ ನಡೆಸಿದ್ದೇವೆ ಎಂದು ಕಾರಜೋಳ ತಿಳಿಸಿದರು.
ಶ್ರದ್ಧೆ ಮತ್ತು ಭಕ್ತಿಯಿಂದ “ಓಂ ನಮಃ ಶಿವಾಯ” ಧ್ಯಾನ ಮಾಡಿದ್ದು, ಭಗವಂತನು ಎಲ್ಲರಿಗೂ ಒಳಿತನ್ನು ನೀಡಲಿ, ಲೋಕ ಕಲ್ಯಾಣವಾಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ಹೇಳಿದರು.



