ರಾಯಚೂರು: ಹಣ ಕೊಡಲು ನಿರಾಕರಿಸಿದ ತಾಯಿಯನ್ನೇ ಮಗ ಕಲ್ಲಿನಿಂದ ಜಜ್ಜಿ ಕೊಲೆಗೈದ ಹೃದಯವಿದ್ರಾವಕ ಘಟನೆ ಮಸ್ಕಿ ತಾಲೂಕಿನ ಜಕ್ಕೇರುಮಡು ತಾಂಡ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಚಂದವ್ವ (58) ಮೃತರು. ಕೊಲೆಗಡುಕ ಮಗ ಕುಮಾರನನ್ನು ಮುದಗಲ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಕುಮಾರ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಊರಿಗೆ ಬಂದಾಗಲೆಲ್ಲ ತನ್ನ ತಾಯಿ ಚಂದವ್ವನಿಗೆ ಹಣ ಕೊಡಬೇಕು ಎಂದು ಜಗಳ ತೆಗೆದು ಹಲ್ಲೆ ನಡೆಸುತ್ತಿದ್ದನೆಂದು ತಿಳಿದುಬಂದಿದೆ. ಜನವರಿ 25ರಂದು ಬೆಳಗ್ಗೆ ಬೆಂಗಳೂರಿನಿಂದ ಜಕ್ಕೇರುಮಡು ತಾಂಡಕ್ಕೆ ಬಂದ ಕುಮಾರ, ತಾಯಿಯೊಂದಿಗೆ ಜಗಳ ತೆಗೆದು, ಹೊಲ ಮಾರಾಟ ಮಾಡಿ ಅಥವಾ ಅಡವಿಟ್ಟು ಎರಡು ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದ್ದಾನೆ.
ಇದಕ್ಕೆ ಚಂದವ್ವ, ಕಿರಿಯ ಪುತ್ರ ಸಂತೋಷನ ಮದುವೆ ಮಾಡಬೇಕಿದೆ, ನಮ್ಮ ಬಳಿ ಹಣವಿಲ್ಲ, ಹೊಲ ಮಾರಿದರೆ ಮದುವೆಗೆ ಹಣ ಎಲ್ಲಿಂದ ತರೋದು? ನೀನು ನಿನ್ನ ಪಾಡಿಗೆ ಹೆಂಡತಿಯ ಜೊತೆ ಇದ್ದು ತಮ್ಮನ ಮದುವೆ ಬಗ್ಗೆ ಯೋಚನೆ ಮಾಡಲ್ಲ ಎಂದು ಹೇಳಿ ಹಣ ಕೊಡಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಕುಮಾರ ಮನೆಯ ಛಾವಣಿಗೆ ಹಾಕಿದ್ದ ಸಿಮೆಂಟ್ ಶೀಟ್‌ಗಳನ್ನು ಒಡೆದು, ನಾಳೆಯೊಳಗೆ ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ತೆರಳಿದ್ದಾನೆ.
ನಿನ್ನೆ (ಸೋಮವಾರ) ಸಂಜೆ ಸುಮಾರು 5 ಗಂಟೆಗೆ ಮತ್ತೆ ಮನೆಗೆ ಬಂದ ಕುಮಾರ, ತಾಯಿಯೊಂದಿಗೆ ಜಗಳ ತೆಗೆದು, ಎರಡು ಲಕ್ಷ ರೂಪಾಯಿ ಕೊಡು, ನಾನು ಬೆಂಗಳೂರಿಗೆ ಹೋಗಬೇಕು ಎಂದು ಹೇಳಿದ್ದಾನೆ. ಹಣ ಇಲ್ಲ ಎಂದು ಚಂದವ್ವ ಹೇಳುತ್ತಿದ್ದಂತೆ, ಕುಮಾರ ಏಕಾಏಕಿ ತಾಯಿಯ ತಲೆ ಕೂದಲು ಹಿಡಿದು ಮನೆಯ ಮುಂದಿರುವ ಸತ್ಯಸೇವಲಾಲ ಭವನದ ಬಳಿ ಎಳೆದೊಯ್ದು ಗೋಡೆಗೆ ಗುದ್ದಿಸಿ, ತಲೆಗೆ ಕಲ್ಲಿನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ.
ಗಂಭೀರವಾಗಿ ಗಾಯಗೊಂಡ ಚಂದವ್ವರನ್ನು ಮುದಗಲ್ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಘಟನೆಯ ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮುದಗಲ್ ಪೊಲೀಸ್ ಠಾಣೆಯಲ್ಲಿ ಕಲಂ 115(2), 352, 351(2), 103(1) ಬಿಎನ್‌ಎಸ್–2023 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.



