ಕಲಬುರ್ಗಿ:- ಇನ್ಸೂರೆನ್ಸ್ ಹಣಕ್ಕಾಗಿ ಮಗನೋರ್ವ ತಂದೆಯನ್ನೇ ಕೊಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಬೆಣ್ಣೂರ್ (ಬಿ) ಕ್ರಾಸ್ ಬಳಿ ಜರುಗಿದೆ.
ಆರು ತಿಂಗಳ ಹಿಂದೆ ಅಪಘಾತದ ಕಥೆ ಕಟ್ಟಿದ ಮಗನಿಂದಲೇ ಕೊಲೆ ರಹಸ್ಯ ಬಯಲಾಗಿದೆ. ಇದೀಗ ಘಟನೆ ಸಂಬಂಧ ತಂದೆಯನ್ನೆ ಕೊಲೆ ಮಾಡಿದ ಮಗ ಸೇರಿ ನಾಲ್ವರು ಆರೋಪಿಗಳನ್ನು ಮಾಡಬೂಳ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅರುಣ್ , ಯುವರಾಜ್ , ಸತೀಶ್ , ರಾಕೇಶ್ ಬಂಧಿತರು.
ಜುಲೈ 8 ರಂದು ಸತೀಶ್ ಹಾಗೂ ಕಾಳಿಂಗರಾವ್ ಬೈಕ್ ಮೇಲೆ ಬರ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು. ಈ ವೇಳೆ ತಂದೆ ಕಾಳಿಂಗರಾವ್ ಸ್ಥಳದಲ್ಲೇ ಮೃತ ಪಟ್ಟಿದ್ದರೆ, ಸತೀಶ್ ಗೆ ಸಣ್ಣ ಪುಟ್ಟ ಗಾಯವಾಗಿತ್ತು.
ಅಪಘಾತದ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ತನಿಖೆ ವೇಳೆ ಬೆಚ್ಚಿ ಬೀಳಿಸುವ ಅಂಶ ಬಯಲಿಗೆ ಬಂದಿದೆ. ಎಸ್, ಕಲಬುರಗಿ ನಗರದ ಆದರ್ಶ ನಗರದಲ್ಲಿ ಮೃತ ಕಾಳಿಂಗರಾವ್ ಮಗ ಸತೀಶ್ ಹೊಟೇಲ್ ವ್ಯಾಪಾರ ಮಾಡಿಕೊಂಡಿದ್ದ. ಹೊಟೇಲ್ ವ್ಯಾಪಾರ ಹಾಗೂ ಮನೆಯ ಸಲುವಾಗಿ ಲಕ್ಷ ಲಕ್ಷ ಸಾಲ ಮಾಡಿಕೊಂಡಿದ್ದ. ಹೀಗಾಗಿ ಸಾಲದ ಬಗ್ಗೆ ಸ್ನೇಹಿತ ಅರುಣ್ ಬಳಿ ಸತೀಶ್ ಹೇಳಿಕೊಂಡಿದ್ದ. ಅದರಂತೆ ಅರುಣ್ ಸತೀಶ್ ಗೆ ಮಾಸ್ಟರ್ ಐಡಿಯಾ ಕೊಟ್ಟಿದ್ದ. ಸ್ನೇಹಿತನ ಸಲಹೆಯಂತೆ ಸತೀಶ್ ಅಪ್ಪನ ಹೆಸರಲ್ಲಿ ಎರಡು ಇನ್ಸೂರೆನ್ಸ್ ಮಾಡಿಸಿದ್ದ. ಆಕ್ಸಿಡೆಂಟ್ ನಲ್ಲಿ ಸತ್ತ ಬಳಿಕ ಇನ್ಸೂರೆನ್ಸ್ ಹಣ ಪಡೆಯಲು ಪ್ಲ್ಯಾನ್ ಮಾಡಿದ್ದ. ಅದರಂತೆ ಅಪಘಾತದ ಪ್ಲ್ಯಾನ್ ಮಾಡಿ ಇದೀಗ ಪೊಲೀಸರ ಅತಿಥಿ ಆಗಿದ್ದಾರೆ.
ಅಷ್ಟೇ ಅಲ್ಲದೇ ಒಂದು ಇನ್ಸೂರೆನ್ಸ್ ನಿಂದ ಮಗ ಸತೀಶ್ ಐದು ಲಕ್ಷ ಹಣ ಕೂಡ ಪಡೆದಿದ್ದ. ಮತ್ತೊಂದು ಕಂಪನಿಯಿಂದ 22 ಲಕ್ಷ ಹಣ ಪಡೆಯಲು ಮುಂದಾಗಿದ್ದ. ಆದರೆ ತನಿಖೆ ವೇಳೆಯಲ್ಲಿ ಮಗನ ಅಸಲಿ ಮುಖ ಬಯಲಾಗಿದೆ.
ಅಪಘಾತದ ಕಥೆ ಡಿಫರೆಂಟ್ ಆಗಿ ಹೇಳಿ ಅನುಮಾನ ಬರುವಂತೆ ಪೊಲೀಸರ ಮುಂದೆ ಸತೀಶ್ ವರ್ತಿಸಿದ್ದರ ಹಿನ್ನೆಲೆ ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಕೂಡಲೇ ಮಗ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.