ದಕ್ಷಿಣಾ ಆಫ್ರಿಕಾ ವಿರುದ್ಧ ನಡೆದ ಚಾಂಪಿಯನ್ ಟ್ರೋಫಿ ಪಂದ್ಯದಲ್ಲಿ ಇಂಗ್ಲೆಂಡ್ ಸೋತು ಟೂರ್ನಿಯಿಂದಲೇ ಔಟ್ ಆಗಿದೆ. ಇನ್ನೂ ಭರ್ಜರಿ ಗೆಲುವಿನೊಂದಿಗೆ ಸೌತ್ ಆಫ್ರಿಕಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಕಳಪೆ ಪ್ರದರ್ಶನದೊಂದಿಗೆ ಕೇವಲ 179 ರನ್‌ಗಳಿಗೆ ಆಲೌಟ್ ಆಯಿತು. ಸಾಧಾರಣ ರನ್‌ಗಳ ಗುರಿ ಬೆನ್ನತ್ತಿದ ಆಫ್ರಿಕಾ ರಸಿ ವ್ಯಾನ್ ಡರ್ ಡುಸೆನ್ (72) ಮತ್ತು ಹೆನ್ರಿಚ್ ಕ್ಲಾಸೆನ್ (64) ಫಿಫ್ಟಿ ಆಟದ ನೆರವಿನಿಂದ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.
180 ರನ್‌ಗಳ ಟಾರ್ಗೆಟ್ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 29.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ 2 ಹಾಗೂ ಆದಿಲ್ ರಶೀದ್ 1 ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ಗೆ ಆರಂಭದಲ್ಲೇ ಶಾಕ್ ಎದುರಾಯಿತು. ಮೊದಲ ಓವರ್‌ನಲ್ಲೇ ಫಿಲ್ ಸಾಲ್ಟ್ ವಿಕೆಟ್ ಒಪ್ಪಿಸಿ ಹೊರ ನಡೆದರು. ನಂತರ ಬಂದ ಜೇಮಿ ಸ್ಮಿತ್ ಕೂಡ ಶೂನ್ಯ ಸುತ್ತಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.
ಜೋ ರೂಟ್ 37, ಜೋಫ್ರಾ ಆರ್ಚರ್ 25, ಬೆನ್ ಡಕೆಟ್ 24, ಕ್ಯಾಪ್ಟನ್ ಜೋಸ್ ಬಟ್ಲರ್ 21, ಹ್ಯಾರಿ ಬ್ರೂಕ್ 19 ರನ್ ಗಳಿಸಿದರು. ಇಂಗ್ಲೆಂಡ್ ತಂಡವು 38.2 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 179 ರನ್‌ಗಳಿಸಿತು. ಈ ಮೂಲಕ ದ. ಆಫ್ರಿಕಾ ವಿರುದ್ಧ ಸೋತ ಇಂಗ್ಲೆಂಡ್, ಟೂರ್ನಿಯಿಂದ ಹೊರ ಬಿದ್ದಿದೆ.